ಡಾ. ಸಿ.ಆರ್. ಪರಶುರಾಮ್ ಅವರಿಗೆ ‘ಸಾಲುಮರದ ತಿಮ್ಮಕ್ಕ ಸದ್ಭಾವನಾ ರಾಜ್ಯ ಪ್ರಶಸ್ತಿ’ ಪ್ರದಾನ

0
54

ಶಿಕಾರಿಪುರ : ಸಹಕಾರ, ಜಾನಪದ ಕಲೆ, ಸಮಾಜಸೇವೆ, ಕೃಷಿ, ಪರಿಸರ ಸಂರಕ್ಷಣೆ ಹಾಗೂ ಸಂಘಟನಾ ಕ್ಷೇತ್ರಗಳಲ್ಲಿ ಸುದೀರ್ಘ ಅವಧಿಯಿಂದ ಮೌನವಾಗಿ, ಆದರೆ ಪರಿಣಾಮಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಚೌಟಗಿ ಕಲಾವಿದ ಹಾಗೂ ಸಮಾಜಸೇವಕ ಡಾ. ಸಿ.ಆರ್. ಪರಶುರಾಮ್ ಅವರಿಗೆ ಪ್ರತಿಷ್ಠಿತ ‘ಸಾಲುಮರದ ತಿಮ್ಮಕ್ಕ ಸದ್ಭಾವನಾ ರಾಜ್ಯ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು.

ವಿಶ್ವ ಪರಿಸರ ದಿನಾಚರಣೆ, ಜಾನಪದ ಯುವಜನ ಮೇಳ ಹಾಗೂ ಶ್ರೀ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಅರಣ್ಯ ಇಲಾಖೆ, ಕೊಪ್ಪ ವಿಭಾಗ, ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಗ್ರಾಮ ಅರಣ್ಯ ಸಮಿತಿಗಳ ಒಕ್ಕೂಟದ ಸಹಯೋಗದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಡಾ. ಪರಶುರಾಮ್ ಅವರು ಶ್ರೀ ಕನಕ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಶಿಕಾರಿಪುರದ ಸಂಸ್ಥಾಪಕರು, ಕರ್ನಾಟಕ ರಾಜ್ಯ ಜಾನಪದ ಕಲಾವಿದರ ಸಂಘದ ಉಪಾಧ್ಯಕ್ಷರು, ಪತಂಜಲಿ ಶಿಕಾರಿಪುರ ಶಾಖೆಯ ಗೌರವಾಧ್ಯಕ್ಷರು ಹಾಗೂ ಪತಂಜಲಿ ರಾಜ್ಯ ಸಮಿತಿಯ ಸದಸ್ಯರು ಆಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಚೌಟಗಿ ಕಲೆ, ಜಾನಪದ ಸಂಸ್ಕೃತಿ, ಪರಿಸರ ಜಾಗೃತಿ, ಕೃಷಿ ಅಭಿವೃದ್ಧಿ ಹಾಗೂ ಸಾಮಾಜಿಕ ಸಂಘಟನಾ ಚಟುವಟಿಕೆಗಳಲ್ಲಿ ಅವರು ಸಲ್ಲಿಸಿರುವ ವಿಶಿಷ್ಟ ಕೊಡುಗೆಯನ್ನು ಪರಿಗಣಿಸಿ ಈ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ಸ್ವೀಕರಿಸಿದ ಡಾ. ಪರಶುರಾಮ್ ಅವರು, ಈ ಗೌರವವು ತಮ್ಮ ಸೇವಾ ಕಾರ್ಯಗಳಿಗೆ ಮತ್ತಷ್ಟು ಪ್ರೇರಣೆ ನೀಡಿದ್ದು, ಸಮಾಜ ಮತ್ತು ಪರಿಸರದ ಒಳಿತಿಗಾಗಿ ಮುಂದೆಯೂ ಶ್ರಮಿಸುವುದಾಗಿ ತಿಳಿಸಿದರು.

LEAVE A REPLY

Please enter your comment!
Please enter your name here