
ಮಂಗಳೂರು : ನಮ್ಮ ಟ್ರಸ್ಟಿನ ‘ಅವೇಕ್ ಕುಡ್ಲ’ ಪರಿಕಲ್ಪನೆಯಡಿಯಲ್ಲಿ ದಿನಾಂಕ.29-06-2026 ಆದಿತ್ಯವಾರದಂದು ವಿಜಯ ಗೇಮ್ಸ್ ಟೀಮ್ (ರಿ.) ಬೋಳಾರ ಹಾಗೂ ಕಾಸ್ಸಿಯಾ ಪ್ರೌಢ ಶಾಲೆಯ ಗೈಡ್ಸ್ ವಿಭಾಗದ ಸಹಯೋಗದಲ್ಲಿ ನಗರದ ಬೋಳಾರ ಪ್ರದೇಶದಲ್ಲಿ ‘ಸ್ವಚ್ಛತಾ ಜಾಗೃತಿ ಅಭಿಯಾನ’ ನಡೆಯಿತು.
ವಿಜಯ ಗೇಮ್ಸ್ ಟೀಮ್ ತಂಡದ ಅಧ್ಯಕ್ಷರಾದ ಮನೋಜ್ ಕೋಟ್ಯಾನ್ ರವರ ಸಾರಥ್ಯದ ಸದಸ್ಯರ ತಂಡ ಬೋಳಾರ ರಸ್ತೆಯ ಸರ್ಕಾರಿ ಹಿ.ಪ್ರಾ ಶಾಲೆಯಿಂದ ಬೋಳಾರ ಕೆಡವಿನ ಬಾಗಿಲು ವರೆಗಿನ ರಸ್ತೆಯ ಎರಡೂ ಬದಿಗಳ ಪ್ಲಾಸ್ಟಿಕ್ ಪೇಪರ್ ಸೇರಿದಂತೆ ಇನ್ನಿತರೆ ಕಸ-ಕಡ್ಡಿಗಳನ್ನು ಹೆಕ್ಕಿದರು.
ಪ್ರದೇಶವನ್ನು ಸ್ವಚ್ಛಗೊಳಿಸಿದರು. ತಂಡದ ಉಪಾಧ್ಯಕ್ಷರುಗಳಾದ ದೀಪಕ್ ಸುವರ್ಣ ಹಾಗೂ ಪ್ರವೀಣ್ ರವರನ್ನೊಳಗೊಂಡ ಮತ್ತೊಂದು ತಂಡ ನೇತ್ರಾವತಿ ನದಿ ತಟದಲ್ಲಿದ್ದ ಥರ್ಮಕಾಲ್ ಸೇರಿದಂತೆ ಎಲ್ಲಾ ಕಸವನ್ನು ಹೆಕ್ಕಿ ಪ್ರದೇಶವನ್ನು ಸ್ವಚ್ಛಗೊಳಿಸಿದರು.
ಕಾಸ್ಸಿಯಾ ಪ್ರೌಢ ಶಾಲೆಯ ಗೈಡ್ಸ್ ಕ್ಯಾಪ್ಟನ್ ಪ್ರೀತಿ ಲೋಬೊ ಮತ್ತು ಅಂಗನವಾಡಿ ಕಾರ್ಯಕರ್ತೆ ಶೋಭಾರವರ ನೇತೃತ್ವದಲ್ಲಿ ಶಾಲಾ ಗೈಡ್ಸ್ ವಿದ್ಯಾರ್ಥಿನಿಯರು ಬೋಳಾರ ರಸ್ತೆಯ ಅಂಗಡಿ-ಮುಂಗಟ್ಟುಗಳಿಗೆ ತೆರಳಿ ಕಡ್ಡಾಯವಾಗಿ ಕಸದ ಡಬ್ಬಿ ಇಡುವಂತೆ ಹಾಗೂ ಮನೆಗಳಿಗೆ ತೆರಳಿ ಕಸವನ್ನು ವೈಜ್ಞಾನಿಕವಾಗಿ ವಿಂಗಡಿಸುವಂತೆ ಹಾಗೂ ಕಸವನ್ನ ಪಾಲಿಕೆಯ ವಾಹನಕ್ಕೆ ಕೊಡುವಂತೆ ಜಾಗೃತಿ ಮೂಡಿಸಿದರು.
ನಗರ ಪಾಲಿಕೆ ವತಿಯಿಂದ ರಸ್ತೆ ಬದಿಯಲ್ಲಿ ಬೆಳೆದಿದ್ದ ಹುಲ್ಲುಗಳನ್ನು ಕಟಾವು ಮಾಡಲಾಯಿತು. ಸ್ವಚ್ಛತಾ ಅಭಿಯಾನದಲ್ಲಿ ಟ್ರಸ್ಟಿನ ಸದಸ್ಯರಾದ ರಾಮ ದೇವಾಡಿಗ , ಸರಿತಾ, ವಿಶ್ವಕರ್ಮ ಸಹಕಾರಿ ಬ್ಯಾಂಕ್ ನ ಸಾರ್ವಜನಿಕ ಸಂಪರ್ಕಾಧಿಕಾರಿ ಚೇತನ್, ವಿಜಯ ಗೇಮ್ಸ್ ಟೀಮ್ ತಂಡದ ಹಿರಿಯ ಸದಸ್ಯರುಗಳಾದ ಗಣೇಶ್, ಸುಧೀರ್ ಬೋಳಾರ್ , ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟಿನ ಕಾರ್ಯದರ್ಶಿ ಉಮಾನಾಥ್ ಕೋಟೆಕಾರ್ ರವರು ಅಭಿಯಾನದಲ್ಲಿ ಪಾಲ್ಗೊಂಡವರೆಲ್ಲರನ್ನು ಉದ್ದೇಶಿಸಿ ‘ಸ್ಥಳೀಯ ಸಂಘ-ಸಂಸ್ಥೆಗಳು ಅವರವರ ಪ್ರದೇಶಗಳ ಸಮಸ್ಯೆಗಳನ್ನು ವೈಭವೀಕರಿಸದೆ ಅದರ ಪರಿಹಾರದ ಕಡೆಗೆ ಗಮನಹರಿಸಿಸುವುದೇ ಅವೇಕ್ ಕುಡ್ಲ’ ಎಂದು ಟ್ರಸ್ಟಿನ ಅವೇಕ್ ಕುಡ್ಲ ಪರಿಕಲ್ಪನೆಯ ಬಗ್ಗೆ ವಿವರಿಸಿ; ನಿರಂತರವಾಗಿ ಸುರಿಯುತ್ತಿದ್ದ ಮಳೆಯ ನಡುವೆಯೂ ಅಭಿಯಾನವನ್ನು ಯಶಸ್ವಿಗೊಳಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದ ಹೇಳಿದರು.
ಮೇಲಿನ ಫೋಟೋದಲ್ಲಿ ಕಾಣುವ ಅಷ್ಟೂ ಕಸಗಳು ಸುಮಾರು 500-600 ಮೀಟರ್ ರಸ್ತೆಯಲ್ಲಿ ನಮ್ಮ ನಿಮ್ಮೆಲರ ನಿರ್ಲಕ್ಷದಿಂದ ಬಿದ್ದಿದ್ದ ಕಸಗಳು! ಅದೂ ಕೂಡ ಕೇವಲ ಕೈಯಿಂದ ಹೆಕ್ಕಿದ ಕಸಗಳು! ಹಾಗಾದರೆ ಸರಿಯಾಗಿ ಗುಡಿಸಿ ತೆಗೆದರೆ ಇನ್ನೆಷ್ಟು ಸಿಗಬಹುದು?
ನಮ್ಮ ಇಡೀ ನಗರದಲ್ಲಿ ಊಹಿಸಲೂ ಅಸಾಧ್ಯ.. ಆದುದರಿಂದ ಜನರು ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ ಕಸದ ಡಬ್ಬಿಗೆ ಹಾಕಿ. ಕಸದ ಡಬ್ಬಿ ಇಲ್ಲದಾಗ ‘ನಮ್ಮ ಕಸ-ನಮ್ಮ ಜವಾಬ್ದಾರಿ’ ಎಂಬುದನ್ನು ಅರಿತು ಕಸವನ್ನು ನಮ್ಮ ಮನೆಗೆ/
ಆಫೀಸ್ ಗೆ ತೆಗೆದುಕೊಂಡು ಹೋಗಿ ಅಲ್ಲಿ ವಿಲೇವಾರಿ ಮಾಡುವುದರಿಂದ ನಮ್ಮ ರಸ್ತೆ, ನಮ್ಮ ಊರು ಸ್ವಚ್ಛ ಇರಲು ಸಾಧ್ಯ. ಇದರ ಜೊತೆಗೆ ಮಂಗಳೂರು ನಗರ ಪಾಲಿಕೆಯೂ ಸಹ ನಗರದ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಹಾಗೂ ಪ್ರಮುಖ ಪ್ರದೇಶಗಳಲ್ಲಿ ಕಸದ ಡಬ್ಬಿಗಳನ್ನು ಇಟ್ಟು ಸರಿಯಾಗಿ ನಿರ್ವಹಿಸಬೇಕಾಗಿದೆ ” ಎಂದು ಟ್ರಸ್ಟಿನ ಕಾರ್ಯಕ್ರಮ ಸಂಯೋಜಕರಾದ ಶ್ರೀ. ಪುನೀತ್ ರವರು ಪತ್ರಿಕೆಗೆ ತಮ್ಮ ಅಭಿಪ್ರಾಯ ತಿಳಿಸಿದರು.
