
ಕಿನ್ನಿಗೋಳಿ, ಜೂನ್ 29: ಕಿನ್ನಿಗೋಳಿಯಲ್ಲಿ ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.
ಮೃತರನ್ನು ರಮೇಶ್ ಪೂಜಾರಿ ಪೂಂಜಾಲಕಟ್ಟೆ (40) ಎಂದು ಗುರುತಿಸಲಾಗಿದೆ. ಅವರು ಕಳೆದ 18 ವರ್ಷಗಳಿಂದ ಕಿನ್ನಿಗೋಳಿಯ ಖಾಸಗಿ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಬೇಕರಿ ಫ್ಯಾಕ್ಟರಿಯಲ್ಲೇ ವಾಸವಿದ್ದರು. ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದ ಅವರು ಸಾಧು ಸ್ವಭಾವದ ವ್ಯಕ್ತಿಯಾಗಿದ್ದರು ಎಂದು ತಿಳಿದುಬಂದಿದೆ.
ಸೋಮವಾರ ಬೆಳಿಗ್ಗೆ ಅವರು ಎಂದಿನಂತೆ ಕೆಲಸಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಸಹೋದ್ಯೋಗಿಗಳು ಹುಡುಕಾಟ ನಡೆಸಿದರು. ಈ ವೇಳೆ ಬಾವಿಯ ಸಮೀಪ ಅವರ ಪಾದರಕ್ಷೆಗಳು ಪತ್ತೆಯಾಗಿದ್ದು ಅನುಮಾನಗೊಂಡು ಬಾವಿಯಲ್ಲಿ ಪರಿಶೀಲಿಸಿದಾಗ ಮೃತದೇಹ ಪತ್ತೆಯಾಯಿತು.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಜೀವರಕ್ಷಕ ಆಂಬುಲೆನ್ಸ್ ತಂಡದ ದಾವೂದ್, ಪ್ರಸಾದ್ ಕೇಚು, ಜಲಾಲ್, ಅಖ್ತರ್, ಸ್ಥಳೀಯರಾದ ಪ್ರವೀಣ್ ಕಾಪಿಕಾಡ್ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಮೃತದೇಹವನ್ನು ಬಾವಿಯಿಂದ ಮೇಲಕ್ಕೆ ಎತ್ತಲಾಯಿತು.
ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಮೃತರು ತಾಯಿ, ಓರ್ವ ಸಹೋದರ, ಓರ್ವ ಸಹೋದರಿ ಹಾಗೂ ಬಂಧು-ಬಳಗವನ್ನು ಅಗಲಿದ್ದಾರೆ.

