ಭಾರತ – ಇಂಗ್ಲೆಂಡ್ ಟಿ20 ಸರಣಿ ಆರಂಭಕ್ಕೂ ಮುನ್ನ ಮಳೆ ಭೀತಿ..!

0
13

ನವದೆಹಲಿ : ಐರ್ಲೆಂಡ್ ವಿರುದ್ಧದ ಟಿ20 ಸರಣಿ ಸೋಲಿನ ಬಳಿಕ ಟೀಂ ಇಂಡಿಯಾ ಇದೀಗ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಸಜ್ಜಾಗಿದೆ. ಹೊಸ ಟಿ20 ನಾಯಕ ಶ್ರೇಯಸ್ ಅಯ್ಯರ್ ಅವರ ನೇತೃತ್ವದಲ್ಲಿ ಭಾರತ ತಂಡ ಬುಧವಾರ (ಜುಲೈ 1) ಡರ್ಹ್ಯಾಮ್ ಕೌಂಟಿಯ ರಿವರ್‌ಸೈಡ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

ಭಾರತ ತಂಡ ಈ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಟಿ20 ಪಂದ್ಯ ಆಡಲಿದ್ದು, ಆದರೆ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚಿದೆ. ಹವಾಮಾನ ವರದಿಗಳ ಪ್ರಕಾರ ಪಂದ್ಯ ನಡೆಯುವ ವೇಳೆಯಲ್ಲಿ ನಿರಂತರ ಮಳೆಯ ಮುನ್ಸೂಚನೆ ಇರುವುದರಿಂದ ಪಂದ್ಯ ಸಂಪೂರ್ಣ ಅಥವಾ ಭಾಗಶಃ ರದ್ದಾಗುವ ಆತಂಕ ಎದುರಾಗಿದೆ.

ಭಾರತೀಯ ಕಾಲಮಾನ ರಾತ್ರಿ 10 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಇಂಗ್ಲೆಂಡ್ ಸಮಯದ ಪ್ರಕಾರ ಸಂಜೆ 5.30ಕ್ಕೆ ಮೊದಲ ಎಸೆತ ನಡೆಯಲಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಸಂಜೆ 5 ಗಂಟೆಯ ಬಳಿಕ ಮಳೆಯ ಸಾಧ್ಯತೆ ಶೇ.43ರಷ್ಟಿದ್ದು, ಸಂಜೆ 6ರಿಂದ ರಾತ್ರಿ 8ರವರೆಗೆ ಅದು ಶೇ.66ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಬಳಿಕವೂ ರಾತ್ರಿಯಿಡೀ ಮಳೆಯ ವಾತಾವರಣ ಮುಂದುವರಿಯುವ ನಿರೀಕ್ಷೆಯಿದೆ.

ಈ ಹಿನ್ನೆಲೆಯಲ್ಲಿ ಪಂದ್ಯವನ್ನು ಪೂರ್ಣ ಪ್ರಮಾಣದಲ್ಲಿ ನಡೆಸುವುದು ಕಷ್ಟವಾಗಬಹುದು ಎಂದು ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗುತ್ತಿದೆ.

ರಿವರ್‌ಸೈಡ್‌ನಲ್ಲಿ ಭಾರತದ ಕಹಿ ನೆನಪು

ರಿವರ್‌ಸೈಡ್ ಕ್ರೀಡಾಂಗಣದಲ್ಲಿ ಭಾರತ ಇದುವರೆಗೆ ಎರಡು ಏಕದಿನ ಪಂದ್ಯಗಳನ್ನು ಮಾತ್ರ ಆಡಿದ್ದು, ಎರಡೂ ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದವು. 2002ರ ನ್ಯಾಟ್‌ವೆಸ್ಟ್ ಟ್ರೋಫಿ ಹಾಗೂ 2011ರ ಏಕದಿನ ಸರಣಿಯ ಪಂದ್ಯಗಳಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿದ್ದರೂ, ಇಂಗ್ಲೆಂಡ್ ಇನ್ನಿಂಗ್ಸ್ ವೇಳೆ ಮಳೆ ಸುರಿದ ಪರಿಣಾಮ ಫಲಿತಾಂಶವಿಲ್ಲದೆ ಪಂದ್ಯಗಳು ಅಂತ್ಯಗೊಂಡಿದ್ದವು.

ಈ ಬಾರಿ ಟಿ20 ಸರಣಿಯ ಮೊದಲ ಪಂದ್ಯದಲ್ಲೂ ಮಳೆ ಅಡ್ಡಿಯಾಗುತ್ತದೆಯೇ ಅಥವಾ ಉಭಯ ತಂಡಗಳು ಪೂರ್ಣ ಪಂದ್ಯ ಆಡಲು ಸಾಧ್ಯವಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here