ಹೊಸ ರೇಷನ್ ಕಾರ್ಡ್, ಹೆಸರು ಸೇರ್ಪಡೆ, ತಿದ್ದುಪಡಿಗೆ ಇಂದೇ ಕೊನೆಯ ದಿನ

0
55

ಮಂಗಳೂರು : ಹೊಸ ಪಡಿತರ ಚೀಟಿ (ರೇಷನ್ ಕಾರ್ಡ್) ಪಡೆಯಲು ಹಾಗೂ ಈಗಿರುವ ಕಾರ್ಡ್‌ನಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಲು ಬಯಸುವವರಿಗೆ ರಾಜ್ಯ ಸರ್ಕಾರ ಮಹತ್ವದ ಅವಕಾಶ ನೀಡಿದ್ದು, ಇಂದು (ಜುಲೈ 3) ಕೊನೆಯ ದಿನವಾಗಿದೆ.

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜುಲೈ 2 ಮತ್ತು 3 ರಂದು ಮಾತ್ರ ಅರ್ಜಿ ಸಲ್ಲಿಸಲು ಸೀಮಿತ ಅವಧಿಯ ಅವಕಾಶ ಕಲ್ಪಿಸಿದ್ದು, ಅರ್ಹರು ಇಂದಿನೊಳಗೆ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದೆ.

ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದರ ಜೊತೆಗೆ, ಕುಟುಂಬದ ಹೊಸ ಸದಸ್ಯರ ಹೆಸರು ಸೇರಿಸುವುದು, ಮೃತಪಟ್ಟ ಅಥವಾ ಬೇರೆಡೆಗೆ ಸ್ಥಳಾಂತರಗೊಂಡ ಸದಸ್ಯರ ಹೆಸರು ತೆಗೆದುಹಾಕುವುದು, ಮೊಬೈಲ್ ಸಂಖ್ಯೆ ಬದಲಾವಣೆ, ಆಧಾರ್ ಸಂಖ್ಯೆ ಜೋಡಣೆ ಸೇರಿದಂತೆ ವಿವಿಧ ತಿದ್ದುಪಡಿಗಳನ್ನು ಇದೇ ಅವಧಿಯಲ್ಲಿ ಮಾಡಿಕೊಳ್ಳಬಹುದು.

ಅರ್ಜಿ ಸಲ್ಲಿಸಲು ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ವಾಸಸ್ಥಳದ ಪುರಾವೆ ಹಾಗೂ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಅಗತ್ಯವಾಗಿದೆ. ಆರು ವರ್ಷದೊಳಗಿನ ಮಕ್ಕಳ ಹೆಸರನ್ನು ಸೇರಿಸಬೇಕಾದರೆ ಅವರ ಜನ್ಮ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.

ಅರ್ಹ ಫಲಾನುಭವಿಗಳು ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಸ್ವತಃ ಅರ್ಜಿ ಸಲ್ಲಿಸಲು ಸಾಧ್ಯವಾಗದವರು ತಮ್ಮ ಸಮೀಪದ ಬೆಂಗಳೂರು ಒನ್, ಕರ್ನಾಟಕ ಒನ್ ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ಸೇವೆ ಪಡೆಯಬಹುದು.

ರೇಷನ್ ಕಾರ್ಡ್ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಹಲವು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಪ್ರಮುಖ ದಾಖಲೆಯಾಗಿದೆ. ಮನೆಯ ಯಜಮಾನಿಯ ಹೆಸರಿನ ತಿದ್ದುಪಡಿ ಅಥವಾ ಹೊಸ ಕಾರ್ಡ್ ಇಲ್ಲದ ಕಾರಣ ಯೋಜನೆಯ ಲಾಭದಿಂದ ವಂಚಿತರಾಗಿರುವ ಮಹಿಳೆಯರು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಇಲಾಖೆ ತಿಳಿಸಿದೆ.

ಈಗಾಗಲೇ ರೇಷನ್ ಕಾರ್ಡ್ ಹೊಂದಿರುವವರು ಇಲಾಖೆಯ ಇ-ಸೇವೆಗಳ ಮೂಲಕ ತಮ್ಮ ಕಾರ್ಡ್‌ನ ವಿವರಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದಾಗಿದೆ. ಇಲಾಖೆಯು ನೀಡಿರುವ ಈ ಸೀಮಿತ ಅವಧಿಯ ಅವಕಾಶ ಇಂದು ಅಂತ್ಯಗೊಳ್ಳಲಿರುವುದರಿಂದ, ಇನ್ನೂ ಅರ್ಜಿ ಸಲ್ಲಿಸದವರು ಅಥವಾ ತಿದ್ದುಪಡಿ ಮಾಡಿಸದವರು ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here