ಮೂಡುಬಿದಿರೆ : ಪೇಟೆಯಲ್ಲಿ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಯಿಂದ ಮುಖ್ಯ ರಸ್ತೆಯ ಕೃಷ್ಣ ಕಟ್ಟೆ ಸಮೀಪ ಅಶ್ವತ್ಥ ಮರದ ಬೃಹತ್ ಕೊಂಬೆಯೊಂದು ರಸ್ತೆಗೆ ಉರುಳಿ ಬಿದ್ದ ಘಟನೆ ನಡೆದಿದೆ. ಈ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರು ಹಾಗೂ ಆಟೋ ರಿಕ್ಷಾ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಹಠಾತ್ತನೆ ರಸ್ತೆಗೆ ಉರುಳಿದ ಮರದ ಬೃಹತ್ ಕೊಂಬೆಯಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಘಟನೆಯ ಸಮಯದಲ್ಲಿ ಕಾರು ಹಾಗೂ ರಿಕ್ಷಾ ಚಾಲಕರು ಸಮಯಪ್ರಜ್ಞೆ ಮೆರೆದು ವಾಹನಗಳನ್ನು ನಿಯಂತ್ರಿಸಿದ ಪರಿಣಾಮ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ.
ಘಟನೆಯ ಬಳಿಕ ಸ್ಥಳೀಯರು ರಸ್ತೆ ತೆರವುಗೊಳಿಸಲು ಮುಂದಾಗಿದ್ದು, ಬಳಿಕ ವಾಹನ ಸಂಚಾರವನ್ನು ಸುಗಮಗೊಳಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ಮಳೆ ಹಾಗೂ ಬಿರುಗಾಳಿಯಿಂದ ಮರಗಳ ಕೊಂಬೆಗಳು ಮುರಿದು ಬೀಳುತ್ತಿರುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಸ್ತೆ ಬದಿಯ ಅಪಾಯಕಾರಿ ಮರಗಳನ್ನು ಸಂಬಂಧಿಸಿದ ಇಲಾಖೆ ಪರಿಶೀಲಿಸಿ, ಮುನ್ನೆಚ್ಚರಿಕಾ ಕ್ರಮವಾಗಿ ಒಣ ಹಾಗೂ ಅಪಾಯಕಾರಿ ಕೊಂಬೆಗಳನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

