ಬೆಂಗಳೂರು : ಶಾಲಾ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಶಾಲಾ ಬಸ್‌ನಲ್ಲಿ ಮಗು ಹತ್ತಿದ ಕ್ಷಣದಿಂದ ಸುರಕ್ಷಿತವಾಗಿ ಪೋಷಕರ ಕೈ ಸೇರುವವರೆಗೂ ಅದರ ಸಂಪೂರ್ಣ ಜವಾಬ್ದಾರಿ ಶಾಲಾ ಆಡಳಿತ ಮಂಡಳಿಯದ್ದೇ ಎಂದು ಸ್ಪಷ್ಟಪಡಿಸಿದೆ.
ಮಂಡ್ಯ ಜಿಲ್ಲೆಯ ಮದ್ದೂರಿನ ಖಾಸಗಿ ಶಾಲೆಯ ಬಸ್‌ನಲ್ಲಿ ನಡೆದ ಅಪಘಾತದಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿಯೊಬ್ಬ ಕಣ್ಣಿನ ದೃಷ್ಟಿ ಕಳೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ತನ್ನ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ (FIR) ರದ್ದುಪಡಿಸುವಂತೆ ಕೋರಿ ಶಾಲಾ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಬೆಳೆಯುವ ವಯಸ್ಸಿನ ಬಾಲಕನೊಬ್ಬ ದೃಷ್ಟಿಹೀನತೆಯಂತಹ ಗಂಭೀರ ಪರಿಣಾಮ ಅನುಭವಿಸಿರುವ ಸಂದರ್ಭದಲ್ಲಿ ತನಿಖೆಯ ಆರಂಭಿಕ ಹಂತದಲ್ಲೇ ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ವಿಚಾರಣೆ ವೇಳೆ ನ್ಯಾಯಪೀಠ, “ಶಾಲಾ ಬಸ್‌ನಲ್ಲಿ ಮಕ್ಕಳ ಸುರಕ್ಷತೆ ಎನ್ನುವುದು ಆಯ್ಕೆಯ ವಿಷಯವಲ್ಲ; ಅದು ‘ಕರ್ನಾಟಕ ಶಿಕ್ಷಣ ಸಂಸ್ಥೆಗಳ ನಿಯಮಾವಳಿ–2018’ರಡಿ ಪ್ರತಿಯೊಂದು ಶಾಲೆಯ ಕಡ್ಡಾಯ ಶಾಸನಬದ್ಧ ಜವಾಬ್ದಾರಿ” ಎಂದು ಸ್ಪಷ್ಟಪಡಿಸಿದೆ.
ಘಟನೆ ನಡೆದ ವೇಳೆ ಬಸ್‌ನಲ್ಲಿ ಅಟೆಂಡರ್ ಇದ್ದರೇ? ಸಿಸಿಟಿವಿ ಕ್ಯಾಮೆರಾ ಕಾರ್ಯನಿರ್ವಹಿಸುತ್ತಿತ್ತೇ? ಮಕ್ಕಳ ಬಳಿ ಅಪಾಯಕಾರಿ ವಸ್ತುಗಳು ಹೇಗೆ ಬಂದವು? ಎಂಬ ಪ್ರಶ್ನೆಗಳನ್ನು ಎತ್ತಿದ ನ್ಯಾಯಾಲಯ, ಈ ಎಲ್ಲ ಅಂಶಗಳ ಬಗ್ಗೆ ಸಮಗ್ರ ಪೊಲೀಸ್ ತನಿಖೆ ಅಗತ್ಯ ಎಂದು ತಿಳಿಸಿದೆ.
2025ರ ಆಗಸ್ಟ್ 1ರಂದು ಮದ್ದೂರಿನ ದಿವ್ಯಜ್ಯೋತಿ ಶಾಲೆಯ ಬಸ್‌ನಲ್ಲಿ ಶಾಲೆ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ, ಕೆಲವು ವಿದ್ಯಾರ್ಥಿಗಳು ತಂದಿದ್ದ ಪಟಾಕಿ ಮಾದರಿಯ ಸಿಡಿಮದ್ದು ಸ್ಫೋಟಗೊಂಡ ಪರಿಣಾಮ ನಾಲ್ಕನೇ ತರಗತಿ ವಿದ್ಯಾರ್ಥಿಯೊಬ್ಬನ ಕಣ್ಣಿಗೆ ಗಂಭೀರ ಗಾಯವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದು, ವೈದ್ಯರು ಶೇ.40ರಷ್ಟು ಅಂಗವೈಕಲ್ಯವಾಗಿದೆ ಎಂದು ದೃಢಪಡಿಸಿದ್ದರು.
ಈ ಘಟನೆಗೆ ಶಾಲೆಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಬಾಲಕನ ಪೋಷಕರು ಪೊಲೀಸ್ ದೂರು ದಾಖಲಿಸಿದ್ದರು. ಆದರೆ, ಶಾಲಾ ಆಡಳಿತ ಮಂಡಳಿ ಎಫ್‌ಐಆರ್ ರದ್ದುಪಡಿಸುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಶಾಲೆಯ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ, ಪ್ರಕರಣದ ತನಿಖೆ ಮುಂದುವರಿಸಲು ಅನುಮತಿ ನೀಡಿದೆ.

