ಆತ್ಮಹತ್ಯೆಗಳ ತಾಣವಾಗುತ್ತಿದೆಯೇ ಉದ್ಯಾವರ ಸೇತುವೆ? ಎತ್ತರದ ತಡೆಬೇಲಿ, ಸಿಸಿ ಕ್ಯಾಮೆರಾಗೆ ಸ್ಥಳೀಯರ ಆಗ್ರಹ

0
11

ಉದ್ಯಾವರ : ಉಡುಪಿ ಜಿಲ್ಲೆಯ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-66ರ ಪಾಪಾನಾಶಿನಿ ನದಿಗೆ ಅಡ್ಡಲಾಗಿರುವ ಉದ್ಯಾವರ ಸೇತುವೆ ಇದೀಗ ಆತ್ಮಹತ್ಯೆಗಳ ತಾಣವಾಗಿ ಮಾರ್ಪಡುತ್ತಿದೆಯೇ ಎಂಬ ಆತಂಕ ಸ್ಥಳೀಯರನ್ನು ಕಾಡುತ್ತಿದೆ.

ಕಳೆದ ಕೆಲವು ವರ್ಷಗಳಿಂದ ಈ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿರುವುದರಿಂದ ಸ್ಥಳೀಯರು ಹಾಗೂ ವಾಹನ ಸವಾರರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರ ಆಗ್ರಹ ಏನು?

ಸ್ಥಳೀಯ ನಿವಾಸಿ ಪ್ರಮೋದ್ ಅವರು ಮಾತನಾಡಿ, “ಸೇತುವೆಯ ಎರಡೂ ಬದಿಗಳಲ್ಲಿ 8 ರಿಂದ 10 ಅಡಿ ಎತ್ತರದ ಕಬ್ಬಿಣದ ತಂತಿ ತಡೆಬೇಲಿ ನಿರ್ಮಿಸಿದರೆ ನದಿಗೆ ಹಾರುವುದನ್ನು ತಡೆಯಬಹುದು. ದೇಶದ ಹಲವು ರಾಜ್ಯಗಳಲ್ಲಿ ಇದೇ ಮಾದರಿಯ ಸುರಕ್ಷತಾ ವ್ಯವಸ್ಥೆ ಅಳವಡಿಸಿ ಯಶಸ್ವಿಯಾಗಿದೆ” ಎಂದರು.

ಇದರೊಂದಿಗೆ ಸೇತುವೆಯ ಮೇಲೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ. ಅನುಮಾನಾಸ್ಪದ ಚಲನವಲನಗಳ ಮೇಲೆ ನಿಗಾ ಇಡಲು, ತುರ್ತು ಪರಿಸ್ಥಿತಿಯಲ್ಲಿ ಪೊಲೀಸ್ ಹಾಗೂ ರಕ್ಷಣಾ ತಂಡಗಳಿಗೆ ತಕ್ಷಣ ಮಾಹಿತಿ ನೀಡಿ ಜೀವ ಉಳಿಸಲು ಇದು ನೆರವಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಡಬಲ್ ಲಾಭ:

ಎತ್ತರದ ತಡೆಬೇಲಿ ನಿರ್ಮಾಣದಿಂದ ಆತ್ಮಹತ್ಯೆ ತಡೆಯುವುದಷ್ಟೇ ಅಲ್ಲ, ಪಾಪಾನಾಶಿನಿ ನದಿಗೆ ಕಸ ಹಾಗೂ ತ್ಯಾಜ್ಯ ಎಸೆಯುವ ಪ್ರವೃತ್ತಿಗೂ ಕಡಿವಾಣ ಬೀಳಲಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಸೇತುವೆಗೆ ಶಾಶ್ವತ ಸುರಕ್ಷತಾ ವ್ಯವಸ್ಥೆ ಕಲ್ಪಿಸಿ, ಅಮಾಯಕರ ಪ್ರಾಣ ಉಳಿಸಬೇಕು ಎಂಬುದು ಜನರ ಒಕ್ಕೊರಲ ಆಗ್ರಹ.

LEAVE A REPLY

Please enter your comment!
Please enter your name here