ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಕೋಲ್ನಾಡ್ ಭಾರತ್ ಬೆಂಜ್ ಶೋ ರೂಮ್ ಬಳಿ ಗುರುವಾರ ತಡರಾತ್ರಿ ಏಕಾಏಕಿ ನಿಲ್ಲಿಸಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಸವಾರ ದಾರುಣ ಸಾವನ್ನಪ್ಪಿದ್ದಾನೆ
ಮೃತ ಬೈಕ್ ಸವಾರರನ್ನು ಮಂಗಳೂರು ನಗರದ ಪಂಜಿಮೊಗರು ತ್ರಿಶಾ ಕಾಲೇಜ್ ಬಳಿಯ ಉರಂದಾಡಿ ಗುಡ್ಡೆ ಪಡುಕೋಡಿ ನಿವಾಸಿ ಆರ್ ಸ್ವಾಮಿನಾಥನ್ (51)ಎಂದು ಗುರುತಿಸಲಾಗಿದೆ
ಮುಂಬೈನಿಂದ ತಿರುವನಂತಪುರಕ್ಕೆ ಸರಕುಗಳನ್ನು ಸಾಗಿಸುತ್ತಿದ್ದ ಲಾರಿ ಮುಲ್ಕಿ ಸಮೀಪದ ಕೋಲ್ನಾಡ್ ಭಾರತ್ ಬೆಂಜ್ ಶೋ ರೂಮ್ ತಲುಪುತ್ತಿದ್ದಂತೆ ಅದರ ಚಾಲಕ ವಿನುರಾಜ್ ಎಂಬಾತ ಏಕಾಏಕಿ ಲಾರಿ ನಿಲುಗಡೆಗೊಳಿಸಿದಾಗ ಹಿಂದಿನಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಬೈಕ್ ಸವಾರ ಆರ್ ಸ್ವಾಮಿನಾಥನ್ ರವರಿಗೆ ಗಂಭೀರ ಗಾಯಗಳಾಗಿದ್ದು ಕೂಡಲೇ ಸ್ಥಳೀಯರು ಮುಕ್ಕ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ
ಅಪಘಾತದಿಂದ ಕೆಲ ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತ ಉಂಟಾಗಿದ್ದು ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಹಾಗೂ ಹೆದ್ದಾರಿ ಇಲಾಖೆಯ ಸಿಬ್ಬಂದಿ ಬೇಟಿ ನೀಡಿ ಪರಿಶೀಲಿಸಿ ಎರಡು ವಾಹನಗಳನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆ.
ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಲಾರಿ ಚಾಲಕ ವಿನುರಾಜ್ ವಿರುದ್ಧ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತವಲಯ ಎಂದೇ ಪ್ರಸಿದ್ಧಿ ಪಡೆದಿರುವ ರಾಷ್ಟ್ರೀಯ ಹೆದ್ದಾರಿ ಕೋಲ್ನಾಡ್ ಭಾರತ್ ಬೆಂಜ್ ಬಳಿ ದಾರಿದೀಪದ ವ್ಯವಸ್ಥೆ ಇಲ್ಲದೆ ಕತ್ತಲು ಆವರಿಸಿದ್ದು, ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

