“ದುಶ್ಚಟಗಳಿಂದ ದೂರವಿದ್ದು ಶಿಕ್ಷಣದತ್ತ ಗಮನಹರಿಸಿ” – ವಿದ್ಯಾರ್ಥಿಗಳಿಗೆ ಸಿಐ ಅಜ್ಜತ್ ಅಲಿ ಕರೆ

0
7

ಪಡುಬಿದ್ರಿ: ವಿದ್ಯಾರ್ಥಿ ಜೀವನದ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಉನ್ನತ ಶಿಕ್ಷಣದ ಹಂತಗಳು ಭವಿಷ್ಯವನ್ನು ರೂಪಿಸುವ ಪ್ರಮುಖ ಘಟ್ಟಗಳಾಗಿ-ದ್ದು, ಈ ಸಮಯದಲ್ಲಿ ದುಶ್ಚಟಗಳಿಗೆ ಬಲಿಯಾಗದೆ ಶಿಕ್ಷಣದತ್ತ ಗಮನ-ಹರಿಸಬೇಕು ಎಂದು ಕಾಪು ಸರ್ಕಲ್ ಇನ್‌ಸ್ಪೆಕ್ಟರ್ ಅಜ್ಜತ್ ಅಲಿ ಸಲಹೆ ನೀಡಿದರು. ಸಾಗರ ಪಡುಬಿದ್ರಿಯ ವಿದ್ಯಾಮಂದಿರ ಶಾಲೆಯಲ್ಲಿ ಸಾಗರ ವಿದ್ಯಾಮಂದಿರ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಆಶ್ರಯದಲ್ಲಿ ಕರ್ನಾಟಕ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ಸಹಯೋಗದಲ್ಲಿ ಶನಿವಾರ ಆಯೋ ಜಿಸಿದ್ದ ಮಾದಕ ಪದಾರ್ಥ ವ್ಯಸನ ತಡೆ, ರಸ್ತೆ ಸುರಕ್ಷತೆ ಜಾಗೃತಿ ಅಭಿಯಾನ ಹಾಗೂ ವಿದ್ಯಾರ್ಥಿಗಳ ರಸಪ್ರಶ್ನೆ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಿ, ಸ್ಪಷ್ಟ ಗುರಿಯೊಂದಿಗೆ ಮುಂದುವರಿಯಬೇಕು. ಮಾದಕ ದ್ರವ್ಯ ವ್ಯಸನದಿಂದ ದೂರವಿರುವುದರ ಜೊತೆಗೆ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ, ಸೈಬರ್ ಅಪರಾಧಗಳ ಬಗ್ಗೆ ಎಚ್ಚರಿಕೆ ವಹಿಸುವುದು ಇಂದಿನ ಅಗತ್ಯವಾಗಿದೆ ಎಂದರು. ಶಾಲಾ ಸಂಚಾಲಕ ಸುಕುಮಾರ್ ಶ್ರೀಯಾನ್ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಸಂಯಮ ಹಾಗೂ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಆದರ್ಶ ನಾಗರಿಕರಾಗಬೇಕು ಎಂದು ಹೇಳಿದರು. ಪಡುಬಿದ್ರಿ ಪೊಲೀಸ್ ಠಾಣೆಯ ಪಿಎಸ್‌ಐ ಶಕ್ತಿವೇಲು ಮಾತನಾಡಿ, ಮಾದಕ ಪದಾರ್ಥ ಸೇವನೆಯು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಲ್ಲದೆ, ವಿವೇಚನಾ ಶಕ್ತಿಯನ್ನು ಕುಂದಿಸಿ ವಿವಿಧ ಅಪರಾಧಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ಆದ್ದರಿಂದ ಯುವಜನತೆ ಇಂತಹ ದುಶ್ಚಟಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು. ಶಾಲಾ ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ವಿಶ್ವಾಸ್ ವಿ. ಅಮೀನ್ ಮಾತನಾಡಿದರು.

ರೋಟರಿ ಡಿಸ್ಟ್ರಿಕ್ಟ್ ವೈಸ್ ಚೇರ್‌ಮನ್ ಸಂತೋಷ್ ಪಡುಬಿದ್ರಿ, ಶಾಲಾ ಮುಖ್ಯೋಪಾಧ್ಯಾಯಿನಿ ಪದ್ಮಶ್ರೀ ಸುರೇಶ್ ರಾವ್, ಪವಿತ್ರಾ ಗಿರೀಶ್ ಹಾಗೂ ಧ್ರುವ್ ಲಲಿತ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತೆ ಕುರಿತು ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ವಿದ್ಯಾರ್ಥಿಗಳು ಪೊಲೀಸ್ ಅಧಿಕಾರಿಗಳೊಂದಿಗೆ ರಸ್ತೆ ಸುರಕ್ಷತೆ, ಮಾದಕ ದ್ರವ್ಯ ವ್ಯಸನ ಹಾಗೂ ಸೈಬರ್ ಅಪರಾಧ ತಡೆಗೆ ಸಂಬಂಧಿಸಿ ಉಪಯುಕ್ತ ಸಂವಾದ ನಡೆಸಿದರು. ಕರ್ನಾಟಕ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ಅಧ್ಯಕ್ಷ ರಚನ್ ಸಾಲ್ಯಾನ್ ಸ್ವಾಗತಿಸಿದರು. ಶಿಕ್ಷಕ ಗುರುಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು. ಅಕ್ಷಯಾ ವಂದಿಸಿದರು.

LEAVE A REPLY

Please enter your comment!
Please enter your name here