ಬೆಂಗಳೂರು : ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ. ಸಮರ್ಪಣಾ ಮನೋಭಾವ, ಶಿಸ್ತು, ಪರಿಶ್ರಮ ಮತ್ತು ನಿರಂತರ ಪ್ರಯತ್ನವೇ ಯಶಸ್ಸಿನ ನಿಜವಾದ ಅಡಿಪಾಯ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ (ಆರ್.ಎಸ್.ಎಸ್.ಟಿ) ನ ಮಹತ್ವಾಕಾಂಕ್ಷಿ ಉಪಕ್ರಮವಾದ ಬೆಂಗಳೂರು ಹಾಗೂ ಮೈಸೂರಿನ ಎಂಟು ಪದವಿಪೂರ್ವ ಕಾಲೇಜುಗಳ ಮೂಲಕ ಯುವ ಪ್ರತಿಭೆಗಳನ್ನು ರೂಪಿಸುವ ಆರ್ವಿ ಲರ್ನಿಂಗ್ ಹಬ್ ಕಾರ್ಯಕ್ರಮದಲ್ಲಿ ಆರ್.ವಿ. ಸ್ಟಾರ್ಸ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಕಠಿಣ ಪರಿಶ್ರಮದ ಮೂಲಕ ಸಾಧನೆ ಮಾಡಬೇಕು. ಶಿಕ್ಷಣ ವ್ಯವಸ್ಥೆ ಜ್ಞಾನಾಧಾರಿತ ಶಿಕ್ಷಣದಿಂದ ಕೌಶಲ್ಯಾಧಾರಿತ ಶಿಕ್ಷಣದತ್ತ ಪರಿವರ್ತನೆಯಾಗಿದ್ದು, ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ತಮ್ಮ ಕೌಶಲ್ಯವನ್ನುಮೇಲ್ದರ್ಜೆಗೇರಿಸಿಕೊಂಡು ಯಶಸ್ಸಿನತ್ತ ಸಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ತಾವು ಓದಿದ ಆರ್.ವಿ. ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಜೀವನ್ನು ಎಂ.ಎನ್. ಅನುಚೇತ್ ಮೆಲುಕು ಹಾಕಿದರು. ಆರ್ವಿ ಲರ್ನಿಂಗ್ ಹಬ್ ಹಾಗೂ ಟ್ರಸ್ಟಿ, ಆರ್ವಿ ಶಿಕ್ಷಣ ಸಂಸ್ಥೆಗಳು ಅಧ್ಯಕ್ಷ ಸಿ.ಎ. ಡಾ. ಎ. ಎಸ್. ವಿಷ್ಣು ಭರತ್ ಅಲಂಪಲ್ಲಿ ಮಾತನಾಡಿ. ಉನ್ನತ ಶಿಕ್ಷಣದಲ್ಲಿಯೂ ಶ್ರೇಷ್ಠ ಸಾಧನೆ ಮಾಡಿ, ಜ್ಞಾನ, ನಾವೀನ್ಯತೆ ಹಾಗೂ ಶ್ರೇಷ್ಠತೆಯ ಮೂಲಕ ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡಬೇಕು. ಜವಾಬ್ದಾರಿಯುತ, ಕರುಣಾಮಯ ಹಾಗೂ ಆದರ್ಶ ನಾಗರಿಕರಾಗಿ ಬೆಳೆವಣಿಗೆ ಸಾಧಿಸಬೇಕು ಎಂದರು.
ಆರ್ವಿ ಲರ್ನಿಂಗ್ ಹಬ್ನ ಪ್ರಥಮ ಬ್ಯಾಚ್ನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸುಮಾರು 150 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಜೆಇಇ ಮೈನ್, ಜೆಇಇ ಅಡ್ವಾನ್ಸ್, ಕೆಸಿಇಟಿ ಹಾಗೂ ಕಾಮೆಡ್ ಕೆ ಸೇರಿದಂತೆ ವಿವಿಧ ವೃತ್ತಿಪರ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಲ್ಲಿಯೂ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಅವರ ಈ ವಿಶಿಷ್ಟ ಸಾಧನೆಯನ್ನು ಗೌರವಿಸುವ ಸಲುವಾಗಿ “ಆರ್.ವಿ- ಸ್ಟಾರ್ಸ್ – ವಾರ್ಷಿಕ ಶೈಕ್ಷಣಿಕ ಸಾಧನಾ ಪ್ರಶಸ್ತಿ” ನೀಡಿ ಸನ್ಮಾನಿಸಲಾಯಿತು. ಆರ್ವಿಯ “ಹೋಗಿ, ಜಗತ್ತನ್ನು ಬದಲಾಯಿಸಿ” ಎಂಬ ಧ್ಯೇಯವಾಕ್ಯದೊಂದಿಗೆ ಅವರು ಉನ್ನತ ಶಿಕ್ಷಣದತ್ತ ಆತ್ಮವಿಶ್ವಾಸದಿಂದ ಹೆಜ್ಜೆಯಿಟ್ಟರು.

ಬೇಸ್ ಎಜುಕೇಶನಲ್ ಸರ್ವೀಸ್ ನ ಮುಖ್ಯಸ್ಥರಾದ ಆರ್. ಪಿ. ಉಮಾಶಂಕರ್, ಆರ್ವಿ ಶಿಕ್ಷಣ ಸಂಸ್ಥೆಗಳ ಸಹ ಕಾರ್ಯದರ್ಶಿ ನಿಖಿಲ್ ಎ. ಮೂರ್ತಿ, ರಿಜಿಸ್ಟ್ರಾರ್ ಸಯ್ಯದ್ ಶಹ್ಮೀರ್, ಆರ್ವಿ ಲರ್ನಿಂಗ್ ಹಬ್ ನ ನಿರ್ದೇಶಕರಾದ ಮಯೂರ್ ಗೋಯಲ್, ಸಹ ನಿರ್ದೇಶಕರಾದ ಶ್ರೀವತ್ಸ ಮತ್ತಿತರರು ಪಾಲ್ಗೊಂಡರು.

