ಲಾಯಿಲ ಜಂಕ್ಷನ್‌ನಲ್ಲಿ ಬೈಕ್ ಪಲ್ಟಿ : ಪ್ಯಾರಾ ಮೆಡಿಕಲ್ ವಿದ್ಯಾರ್ಥಿ ದುರ್ಮರಣ

0
65

ಬೆಳ್ತಂಗಡಿ : ಪ್ರವಾಸ ಮುಗಿಸಿ ಸಂತಸದಿಂದ ಮನೆಗೆ ಹಿಂತಿರುಗುತ್ತಿದ್ದ ವಿದ್ಯಾರ್ಥಿಗಳ ತಂಡದ ಮೇಲೆ ವಿಧಿಯಾಟ ಆಡಿದ್ದು, ಬೆಳ್ತಂಗಡಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಲಾಯಿಲ ಜಂಕ್ಷನ್ ಸಮೀಪ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ಮತ್ತೋರ್ವ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತ ವಿದ್ಯಾರ್ಥಿಯನ್ನು ಮಂಗಳೂರು ನಿವಾಸಿ 23 ವರ್ಷದ ಧೀರಜ್ ಎಂದು ಗುರುತಿಸಲಾಗಿದೆ. ಅವರು ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದರು.

ಮಾಹಿತಿಯಂತೆ, ಸೋಮವಾರ ನಾಲ್ವರು ಸ್ನೇಹಿತರು ಎರಡು ಬೈಕ್‌ಗಳಲ್ಲಿ ಕೊಟ್ಟಿಗೆಹಾರ ಸಮೀಪದ ದೇವರ ಮನೆಗೆ ಪ್ರವಾಸ ಹಾಗೂ ದೇವರ ದರ್ಶನಕ್ಕಾಗಿ ತೆರಳಿದ್ದರು. ಸಂಜೆ ದರ್ಶನ ಮುಗಿಸಿ ಮಂಗಳೂರಿನತ್ತ ಮರಳುತ್ತಿದ್ದ ವೇಳೆ, ಬೆಳ್ತಂಗಡಿ ತಾಲೂಕಿನ ಲಾಯಿಲ ಜಂಕ್ಷನ್ ಸಮೀಪ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಪಲ್ಟಿಯಾಗಿದೆ.

ಅಪಘಾತದ ವೇಳೆ ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ಧೀರಜ್ ಅವರ ತಲೆಗೆ ತೀವ್ರ ಪೆಟ್ಟಾಗಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬ ಕುರಿತು ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here