ಕರ್ನಾಟಕ ಜಾನಪದ ಪರಿಷತ್‌ಗೆ ಹೊಸ ಚೈತನ್ಯ : ದಕ್ಷಿಣ ಕನ್ನಡದ 4 ತಾಲೂಕುಗಳಿಗೆ ನೂತನ ಸಾರಥಿಗಳ ನೇಮಕ

0
65

ವರದಿ -ಮಂದಾರ ರಾಜೇಶ್ ಭಟ್

ಮಂಗಳೂರು : ಕರಾವಳಿಯ ಜಾನಪದ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ತಳಮಟ್ಟದಿಂದಲೇ ಮುನ್ನಡೆಸುವ ದೃಷ್ಟಿಯಿಂದ ‘ಕರ್ನಾಟಕ ಜಾನಪದ ಪರಿಷತ್ತು (ಬೆಂಗಳೂರು)’ ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕದ ತಾಲೂಕು ಘಟಕಗಳಿಗೆ ಭಾರಿ ಪುನರ್ರಚನೆ ಮಾಡಲಾಗಿದೆ.

ಮಂಗಳೂರು, ಉಳ್ಳಾಲ, ಮೂಡುಬಿದಿರೆ ಹಾಗೂ ಬೆಳ್ತಂಗಡಿ ಘಟಕಗಳಿಗೆ ನೂತನ ಅಧ್ಯಕ್ಷರು ಹಾಗೂ ಉಸ್ತುವಾರಿಗಳನ್ನು ಅಧಿಕೃತವಾಗಿ ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.

​ಬೆಂಗಳೂರಿನ ರಾಜ್ಯ ಘಟಕದ ಸಂಪೂರ್ಣ ಅನುಮೋದನೆಯೊಂದಿಗೆ, ದಕ್ಷಿಣ ಕನ್ನಡ ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಕೋಡಿಯಬೈಲ್ ಅವರು ಈ ಮಹತ್ವದ ನೇಮಕಾತಿ ಆದೇಶವನ್ನು ಪ್ರಕಟಿಸಿದ್ದಾರೆ.

​ಮಂಗಳೂರು ತಾಲೂಕು:- ಸಾಂಸ್ಕೃತಿಕ ಚಟುವಟಿಕೆಗಳ ಮುಂಚೂಣಿಯಲ್ಲಿರುವ ಶಿವಪ್ರಸಾದ್ ಕೊಕ್ಕಡ ಅವರನ್ನು ಮಂಗಳೂರು ತಾಲೂಕು ಘಟಕದ ಅಧ್ಯಕ್ಷರನ್ನಾಗಿ ಅಂತಿಮಗೊಳಿಸಲಾಗಿದೆ.

​ಉಳ್ಳಾಲ ತಾಲೂಕು:- ಉಳ್ಳಾಲದ ಸಾಂಸ್ಕೃತಿಕ ಬೆಳವಣಿಗೆಗೆ ವೇಗ ನೀಡಲು ಪ್ರವೀಣ್ ಎಸ್. ಕುಂಪಲ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.

​ಮೂಡುಬಿದಿರೆ ತಾಲೂಕು:- ಪ್ರಸಿದ್ಧ ಸಮಾಜ ಸೇವಕಿ ಹಾಗೂ ‘ ವಾಯ್ಸ್ ಆಫ್ ಆರಾಧನಾ’ ಮತ್ತು ‘ಆರಾಧಿರಲಿ ಬದುಕು’ ತಂಡದ ಸಂಚಾಲಕಿಯಾದ ಪದ್ಮಶ್ರೀ ಭಟ್ ಅವರಿಗೆ ಮೂಡುಬಿದಿರೆ ತಾಲೂಕಿನ ಸಾರಥ್ಯ ನೀಡಲಾಗಿದೆ.

​ಬೆಳ್ತಂಗಡಿ ತಾಲೂಕು:- ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾಯಿತ ಸದಸ್ಯ ಹಾಗೂ ಮೂಡುಬಿದಿರೆ ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿರುವ ವೇಣೂರು ನಿವಾಸಿ, ಪತ್ರಕರ್ತ ಹರೀಶ್ ಅವರನ್ನು ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಎಲ್ಲಾ ಘೋಷಣೆಗಳ ಸಮಯದಲ್ಲಿ ಕಾರ್ಯದರ್ಶಿ ರಾಜೇಶ್ ಸ್ಕೈಲಾರ್ಕ್, ಸಂಘಟಕ ಟಿಪೇಶ ಅಮೀನ್ ಉಪಸ್ಥಿತರಿದ್ದರು

​ಸಂಘಟನೆ ಬಲಪಡಿಸಲು ಉಸ್ತುವಾರಿಗಳ ಹೆಗಲಿಗೆ ಜವಾಬ್ದಾರಿ:-

ಜಾನಪದ ​ಪರಿಷತ್ತಿನ ಸುಗಮ ಆಡಳಿತ ಮತ್ತು ತಾಲೂಕು ಮಟ್ಟದಲ್ಲಿ ಚಟುವಟಿಕೆಗಳನ್ನು ಚುರುಕುಗೊಳಿಸಲು ಪ್ರಮುಖ ಗಣ್ಯರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ. ಉಳ್ಳಾಲ ತಾಲೂಕು ಉಸ್ತುವಾರಿಯಾಗಿ ನ್ಯಾಯವಾದಿ ಅಜ್ಕರ್ ಮುಡಿಪು, ಮಂಗಳೂರು ತಾಲೂಕು ಉಸ್ತುವಾರಿಯಾಗಿ ರಾಜೇಶ್ ಆಳ್ವ ಹಾಗೂ ಮೂಡುಬಿದಿರೆ ಮತ್ತು ಬೆಳ್ತಂಗಡಿ ತಾಲೂಕುಗಳ ಜಂಟಿ ಉಸ್ತುವಾರಿಯಾಗಿ ಹಿರಿಯ ಪತ್ರಕರ್ತ ಮಂದಾರ ರಾಜೇಶ್ ಭಟ್ ಅವರನ್ನು ನೇಮಕ ಮಾಡಲಾಗಿದೆ.

ನೇಮಕಾತಿಯಲ್ಲಿ ಸಹಕಾರ:-

ಈ ಎಲ್ಲಾ ತಾಲೂಕುಗಳ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಹಾಗೂ ಸಂಘಟನಾತ್ಮಕ ಬೆಳವಣಿಗೆಯಲ್ಲಿ ಉಸ್ತುವಾರಿಗಳಾದ ಅಜ್ಕರ್ ಮುಡಿಪು, ರಾಜೇಶ್ ಆಳ್ವ ಮತ್ತು ಮಂದಾರ ರಾಜೇಶ್ ಭಟ್ ಅವರು ಸಕ್ರಿಯವಾಗಿ ಸಹಕರಿಸಿದ್ದಾರೆ ಎಂದು ಜಿಲ್ಲಾ ಘಟಕ ತಿಳಿಸಿದೆ. ಮುಂದಿನ ಅವಧಿಯ ವರೆಗೆ ತಾಲೂಕು ಮಟ್ಟದಲ್ಲಿ ಹೀಗಿರುವ ಉಸ್ತುವಾರಿಗಳೇ ಉಸ್ತುವಾರಿಗಳಾಗಿ ಮುಂದುವರೆಯಲಿದ್ದಾರೆ ಎಂದು ಜಿಲ್ಲಾ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ

​ಗ್ರಾಮೀಣ ಕಲೆಗಳ ಪುನರುತ್ಥಾನ ಮತ್ತು ಯುವ ಪೀಳಿಗೆಗೆ ಜಾನಪದ ಸಂಸ್ಕೃತಿಯನ್ನು ಪರಿಚಯಿಸುವ ಹೊಣೆಗಾರಿಕೆ ಇವರ ಮೇಲಿದ್ದು, ನೂತನ ಪದಾಧಿಕಾರಿಗಳ ನೇಮಕಕ್ಕೆ ಜಿಲ್ಲೆಯ ಸಾಂಸ್ಕೃತಿಕ ವಲಯ ಹಾಗೂ ಕಲಾಭಿಮಾನಿಗಳಿಂದ ವ್ಯಾಪಕ ಒಲವು ಮತ್ತು ಹಾರೈಕೆಗಳು ವ್ಯಕ್ತವಾಗಿವೆ.

LEAVE A REPLY

Please enter your comment!
Please enter your name here