ಉಡುಪಿ: ಅಯೋಧ್ಯೆ ರಾಮ ಮಂದಿರಕ್ಕೆ ನೀಡಿದ ದೇಣಿಗೆ ಮತ್ತು ಹುಂಡಿ ಹಣ ಕಳವು ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ರಾಮನ ಹೆಸರನ್ನು ಬಳಸಿಕೊಂಡು ಬಿಜೆಪಿ ಚುನಾವಣೆಗಳನ್ನು ಎದುರಿಸಿದೆ. 90ರ ದಶಕದಲ್ಲಿ ಮನೆ ಮನೆಗೆ ಇಟ್ಟಿಗೆ ನೀಡಿ, ಪೂಜೆ ಮಾಡಿಸಿ ಮತ ಯಾಚನೆ ನಡೆಸಿದ್ದಾರೆ. ರಾಮ ಮಂದಿರಕ್ಕಾಗಿ ದಶಕಗಳಿಂದ ಸಂಗ್ರಹಿಸಲಾದ ಹಣದ ಸಂಪೂರ್ಣ ಲೆಕ್ಕಪತ್ರ ಸಾರ್ವಜನಿಕರಿಗೆ ಲಭ್ಯವಿಲ್ಲ. ಮಂದಿರ ನಿಮಾರ್ಣದ ವೇಳೆ ರಿಯಲ್ ಎಸ್ಟೇಟ್ ವ್ಯವಹಾರ ನಡೆದಿರುವ ಆರೋಪಗಳಿದ್ದು, ಟ್ರಸ್ಟ್ ಸದಸ್ಯರು ಇದಕ್ಕೆ ಉತ್ತರಿಸಬೇಕು ಎಂದು ಹೇಳಿದರು.
ರಾಮ ಮಂದಿರಕ್ಕೆ ಭಕ್ತರು ನೀಡಿದ ಚಿನ್ನವನ್ನು ಕರ್ನಾಟಕದಲ್ಲೇ ಕರಗಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ರಾಮ ಮಂದಿರ ಆಡಳಿತವನ್ನು ಮಾಹಿತಿ ಹಕ್ಕಿನ ಕಾಯ್ದೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂದು ದೂರಿದರು. ಆರೋಪಗಳ ಸತ್ಯಾಸತ್ಯತೆ ಹೊರಬರಬೇಕಾದರೆ ಎಸ್ಐಟಿ ತನಿಖೆ ಸಾಕಾಗುವುದಿಲ್ಲ. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲೇ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಪ್ರಧಾನಿ ಮೋದಿ ಮನ್ ಕಿ ಬಾತ್ನಲ್ಲಿ ಅನೇಕ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಆದರೆ ರಾಮಮಂದಿರ ಹಗರಣದ ಬಗ್ಗೆ ಮೌನ ವಹಿಸಿದ್ದಾರೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಕಿಣಿ , ಕಾಪು ಬ್ಲಾಕ್ ಕಾಂಗ್ರೆಸ್ ( ದಕ್ಷಿಣ) ಸುಕುಮಾರ್ ವೈ ಉಪಸ್ಥಿತರಿದ್ದರು.

