₹500 ನಕಲಿ ನೋಟಿನ ಹಿಂದೆ ಅಡಗಿತ್ತು ಭಾರಿ ಜಾಲ; 6 ಮಂದಿ ಬಂಧನ

0
43

ತುಮಕೂರು : ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪೊಲೀಸರು ಸಿನಿಮಾ ಕಥೆಗಳನ್ನು ಮೀರಿಸುವ ರೀತಿಯಲ್ಲಿ ರಾಜ್ಯವ್ಯಾಪಿ ಕಾರ್ಯನಿರ್ವಹಿಸುತ್ತಿದ್ದ ಖೋಟಾ ನೋಟಿನ (Fake Note) ಜಾಲವನ್ನು ಭೇದಿಸಿ, ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೇವಲ ಒಂದು ₹500 ಮುಖಬೆಲೆಯ ನಕಲಿ ನೋಟಿನ ಸುಳಿವಿನ ಆಧಾರದ ಮೇಲೆ ಆರಂಭವಾದ ತನಿಖೆ, ಬೆಂಗಳೂರು, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ವಿಸ್ತರಿಸಿದ್ದ ಮುದ್ರಣ, ಮಾರಾಟ ಹಾಗೂ ಚಲಾವಣೆಯ ವ್ಯವಸ್ಥಿತ ಜಾಲವನ್ನು ಬಯಲಿಗೆಳೆದಿದೆ.

ಅಂಗಡಿಯಲ್ಲಿ ಸಿಕ್ಕ ಸುಳಿವು

ಹುಳಿಯಾರಿನ ಅಂಗಡಿಯೊಂದರಲ್ಲಿ ಇಬ್ಬರು ವ್ಯಕ್ತಿಗಳು ಸಿಗರೇಟ್ ಖರೀದಿಸಿ ₹500 ಮುಖಬೆಲೆಯ ನಕಲಿ ನೋಟು ನೀಡಿ ಪರಾರಿಯಾಗಿದ್ದರು. ಅಂಗಡಿ ಮಾಲೀಕರ ದೂರಿನ ಮೇರೆಗೆ ಹುಳಿಯೂರು ಹಾಗೂ ಚಿಕ್ಕನಾಯಕನಹಳ್ಳಿ ಪೊಲೀಸರು ತನಿಖೆ ಆರಂಭಿಸಿದರು. ತನಿಖೆ ಮುಂದುವರಿದಂತೆ ಖೋಟಾ ನೋಟು ಮುದ್ರಣ, ಮಾರಾಟ ಹಾಗೂ ಚಲಾವಣೆಗೆ ಪ್ರತ್ಯೇಕ ಜಾಲವೇ ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ.

ಆರೋಪಿಗಳ ಪಾತ್ರಗಳು

ತನಿಖೆಯಲ್ಲಿ ಬಂಧಿತ ಆರು ಮಂದಿ ಆರೋಪಿಗಳ ಕಾರ್ಯವೈಖರಿಯೂ ಬಹಿರಂಗವಾಗಿದೆ.

  • ರುದ್ರೇಶ್ (ಬೆಂಗಳೂರು) – ನಕಲಿ ನೋಟುಗಳ ಮುದ್ರಣ.
  • ರವಿ (ಮೈಸೂರು) – ನಕಲಿ ನೋಟುಗಳ ಮಾರಾಟ.
  • ಕುಬೇರಪ್ಪ ಹಾಗೂ ಹನುಮಂತಪ್ಪ (ಅನಂತಪುರ) – ಮಧ್ಯವರ್ತಿಗಳಾಗಿ ಕಾರ್ಯನಿರ್ವಹಣೆ.
  • ವೆಂಕಟೇಶ್ ಮತ್ತು ತಿಲಕ್ ಕುಮಾರ್ – ಸಾರ್ವಜನಿಕರ ನಡುವೆ ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಆರೋಪ.

60ಕ್ಕೂ ಅಧಿಕ ನಕಲಿ ನೋಟು ವಶ

ಬಂಧಿತರಿಂದ ₹500 ಮುಖಬೆಲೆಯ 60ಕ್ಕೂ ಹೆಚ್ಚು ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಈ ಜಾಲ ರಾಜ್ಯದ ಇತರೆ ಜಿಲ್ಲೆಗಳಲ್ಲಿಯೂ ನಕಲಿ ನೋಟುಗಳನ್ನು ಚಲಾವಣೆ ಮಾಡಿರುವ ಮಾಹಿತಿ ತನಿಖೆಯಲ್ಲಿ ಲಭ್ಯವಾಗಿದೆ.

ಈ ಪ್ರಕರಣದ ಹಿಂದೆ ಇನ್ನೂ ದೊಡ್ಡ ಜಾಲ ಇರುವ ಶಂಕೆ ವ್ಯಕ್ತವಾಗಿದ್ದು, ಅದರ ಸಂಪೂರ್ಣ ಬೇರು ಪತ್ತೆಹಚ್ಚಲು ಪೊಲೀಸರು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

LEAVE A REPLY

Please enter your comment!
Please enter your name here