36 ಸೆಕೆಂಡುಗಳಲ್ಲಿ 21 ಮೆಟ್ಟಿಲು ಹತ್ತಿದ ರಿಯಾನ್ಸ್
ವಿಜಯಪುರ : ಸಾಧನೆ ಮಾಡಲು ವಯಸ್ಸಿನ ಮಿತಿಯಿಲ್ಲ ಎಂಬುದನ್ನು ವಿಜಯಪುರದ 10 ತಿಂಗಳ ಪುಟ್ಟ ಬಾಲಕ ರಿಯಾನ್ಸ್ ಪಟ್ಟಣಶೆಟ್ಟಿ ಮತ್ತೊಮ್ಮೆ ಸಾಬೀತುಪಡಿಸಿದ್ದಾನೆ. ವಿಜಯಪುರ ನಗರದ ಸಚಿನ್ ಪಟ್ಟಣಶೆಟ್ಟಿ ಹಾಗೂ ಸಿಂಚನಾ ದಂಪತಿಯ ಪುತ್ರನಾದ ರಿಯಾನ್ಸ್, ಅಂಬೆಗಾಲಿಡುವ ಪ್ರಾಯದಲ್ಲೇ ‘ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ಸ್ಥಾನ ಪಡೆದು ಅಪರೂಪದ ಸಾಧನೆಗೈದಿದ್ದಾನೆ.
ಕೇವಲ 10 ತಿಂಗಳ ವಯಸ್ಸಿನಲ್ಲೇ ರಿಯಾನ್ಸ್ 21 ಮೆಟ್ಟಿಲುಗಳನ್ನು ಕೇವಲ 36 ಸೆಕೆಂಡುಗಳಲ್ಲಿ ಸರಾಗವಾಗಿ ಹತ್ತುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾನೆ. ಇಷ್ಟು ಚಿಕ್ಕ ವಯಸ್ಸಿನ ಮಗುವೊಂದು ಇಂತಹ ವೇಗದಲ್ಲಿ ಮೆಟ್ಟಿಲು ಹತ್ತಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಮನೆಯಲ್ಲಿದ್ದಾಗಲೇ ರಿಯಾನ್ಸ್ ಮೆಟ್ಟಿಲುಗಳನ್ನು ಅತ್ಯಂತ ವೇಗವಾಗಿ ಹತ್ತಿ ಇಳಿಯುವುದನ್ನು ಗಮನಿಸಿದ ತಾಯಿ ಸಿಂಚನಾ, ಮಗನ ಸಾಮರ್ಥ್ಯವನ್ನು ಮತ್ತಷ್ಟು ಉತ್ತೇಜಿಸಲು ಒಂದು ಅಡಿ ಎತ್ತರದ ಮೆಟ್ಟಿಲುಗಳನ್ನು ಹತ್ತುವಂತೆ ಪ್ರೋತ್ಸಾಹಿಸಿದರು. ತಾಯಿಯ ಮಾರ್ಗದರ್ಶನದಲ್ಲಿ ರಿಯಾನ್ಸ್ ಯಾವುದೇ ಅಡೆತಡೆಯಿಲ್ಲದೆ ಮೆಟ್ಟಿಲುಗಳನ್ನು ಸುಲಭವಾಗಿ ಹತ್ತಿ ತನ್ನ ವಿಶೇಷ ಪ್ರತಿಭೆಯನ್ನು ಪ್ರದರ್ಶಿಸಿದ.
ಮಗನ ಈ ವಿಶಿಷ್ಟ ಸಾಧನೆಯನ್ನು ಜಗತ್ತಿಗೆ ಪರಿಚಯಿಸಬೇಕೆಂದು ನಿರ್ಧರಿಸಿದ ಪೋಷಕರು, ರಿಯಾನ್ಸ್ ಮೆಟ್ಟಿಲು ಹತ್ತುವ ದೃಶ್ಯಗಳನ್ನು ವಿಡಿಯೋ ರೂಪದಲ್ಲಿ ದಾಖಲಿಸಿ ಅಗತ್ಯ ದಾಖಲೆಗಳೊಂದಿಗೆ ‘ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಸಂಸ್ಥೆಗೆ ಕಳುಹಿಸಿದರು. ಸಲ್ಲಿಸಲಾದ ವಿಡಿಯೋ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿಗಳು ರಿಯಾನ್ಸ್ ಸಾಧನೆಯನ್ನು ಅಧಿಕೃತವಾಗಿ ಮಾನ್ಯಗೊಳಿಸಿ ವಿಶ್ವದಾಖಲೆ ಪ್ರಮಾಣಪತ್ರ ನೀಡಿ ಗೌರವಿಸಿದ್ದಾರೆ.

