ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು ವಿದ್ಯಾರ್ಥಿಗಳು ಅದರ ಸದುಪಯೋಗ ಪಡಿಸಿಕೊಳ್ಳಬೇಕು : ಪ್ರಸಾದ್‌ ಶೆಟ್ಟಿ

0
6

ಕಾರ್ಕಳ : ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು ವಿದ್ಯಾರ್ಥಿಗಳು ಅದರಸದುಪಯೋಗ ಪಡಿಸಿಕೊಳ್ಳಬೇಕೆಂದು ಆಳ್ವಾಸ್‌ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್‌ ಶೆಟ್ಟಿ ಹೇಳಿದರು.

ಅವರು ಜು. 9ರಂದು ಕಾರ್ಕಳ ಕ್ರೈಸ್ಟ್‌ಕಿಂಗ್‌ನಲ್ಲಿ ನಡೆದ ಪತ್ರಿಕಾ ದಿನಾಚರಣೆ – ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಪ್ರತಿನಿತ್ಯ ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಓದು ನಿಮ್ಮ ಭವಿಷ್ಯಕ್ಕೆ ಹೊಸ ದಾರಿ ತೋರಲಿದೆ ಎಂದರು.

ಸನ್ಮಾನ

ಮಾಧ್ಯಮ ಕ್ಷೇತ್ರದ ಸೇವೆಯನ್ನು ಪರಿಗಣಿಸಿ ಕ್ರೈಸ್ಟ್‌ಕಿಂಗ್‌ ಎಜ್ಯುಕೇಶನ್‌ ಟ್ರಸ್ಟ್‌ ವತಿಯಿಂದ ನ್ಯೂಸ್‌ ಕಾರ್ಕಳ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ಬರೆಪ್ಪಾಡಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಕ್ರೈಸ್ಟ್‌ಕಿಂಗ್‌ ಕಾಲೇಜಿನಲ್ಲಿ ಅರ್ಥಪೂರ್ಣವಾಗಿ ಪತ್ರಿಕಾ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ವೈದ್ಯರು, ಶಿಕ್ಷಕರು, ಪತ್ರಕರ್ತರ ವೃತ್ತಿಯಲ್ಲಿ ಇಂದಿಗೂ ಸೇವೆಯನ್ನು ಕಾಣಬಹುದಾಗಿದೆ ಎಂದರು.

ವಿದ್ಯಾರ್ಥಿಗಳು ಪ್ರಚಲಿತ ವಿದ್ಯಮಾನಗಳ ಕುರಿತು ಅರಿವು ಹೊಂದುವುದು ಅವಶ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಎಳವೆಯಿಂದಲೇ ಓದಿನ ಹವ್ಯಾಸ ಬೆಳೆಸಿಕೊಳ್ಳಬೇಕು. ಓದು ಪರೀಕ್ಷೆಯ ಭಯವನ್ನು ದೂರಗೊಳಿಸಿ ಬದುಕಿನಲ್ಲಿ ಭರವಸೆ ತುಂಬಲಿದೆ ಎಂದ ಅವರು ಎಸ್ಸೆಸೆಲ್ಸಿ, ಪಿಯುಸಿ ಫಲಿತಾಂಶದಲ್ಲಿ ಸತತವಾಗಿ ಶೇ. 100 ಫಲಿತಾಂಶ ದಾಖಲಿಸುವ ಕಾರ್ಕಳದ ಕ್ರೈಸ್ಟ್‌ಕಿಂಗ್‌ನ ಶೈಕ್ಷಣಿಕ ಸಾಧನೆ ಹೀಗೆಯೇ ಮುಂದುವರಿಯಲಿ ಎಂದು ಆಶಿಸಿದರು.

ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಧ್ಯಮಬಿಂಬ ಪತ್ರಿಕೆಯ ಸಂಪಾದಕ ವಸಂತ ಕುಮಾರ್ ಮಾತನಾಡಿ, ಸಮಾಜವನ್ನು ಜಾಗೃತಗೊಳಿಸುವ ಪತ್ರಕರ್ತರು ಸದಾ ಎಚ್ಚರಿಕೆಯಿಂದ ಇರಬೇಕು ಎಂದರು.

ಕಾರ್ಕಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಮ್ಮದ್‌ ಶರೀಫ್‌ ಮಾತನಾಡಿ, ಯುವಜನತೆ ಸುದ್ದಿ ಮಾಧ್ಯಮ, ಪತ್ರಿಕೋದ್ಯಮಗಳ ಕಡೆ ಆಕರ್ಷಿತರಾಗಬೇಕು. ಪತ್ರಿಕೋದ್ಯಮ ಎನ್ನುವುದು ಅಪಾರ ಜೀವನಾನುಭವ ನೀಡುವ ಕ್ಷೇತ್ರವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್‌ಕಿಂಗ್‌ ಎಜ್ಯುಕೇಶನ್‌ ಟ್ರಸ್ಟ್‌ ಸದಸ್ಯ ಡಾ. ಪೀಟರ್ ಫೆರ್ನಾಂಡಿಸ್ ಮಾತನಾಡಿ, ಸಮಾಜದಲ್ಲಿ ಧ್ವನಿಯಿಲ್ಲದವರ ಧ್ವನಿಯಾಗಿರುವ ಪತ್ರಕರ್ತರಿಗೆ ಹೆಚ್ಚಿನ ಗೌರವವಿದೆ. ಪತ್ರಕರ್ತರು ಸಮಾಜದ ತಪ್ಪು ಒಪ್ಪುಗಳನ್ನು ತಿದ್ದುವ ಮೂಲಕ ಸುಸ್ಥಿರ ಸಮಾಜ ನಿರ್ಮಿಸಲು ಪ್ರಯತ್ನಿಸುತ್ತಿದ್ದು ಇಂತವರು ನಿಜವಾಗಿಯೂ ಅಭಿನಂದನಾರ್ಹರು ಎಂದರು. ಪತ್ರಕರ್ತರು, ವರದಿಗಾರರು, ಛಾಯಾಗ್ರಾಹಕರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಸಂಸ್ಥೆಯ ಪ್ರಾಚಾರ್ಯ ಲಕ್ಷ್ಮೀ ನಾರಾಯಣ ಕಾಮತ್ ಅವರು ಪ್ರಸ್ತಾವನೆಗೈದರು. ಉಪಪ್ರಾಚಾರ್ಯ ಡಾ. ಪ್ರಕಾಶ್ ಭಟ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜೋಸ್ನಾ ಸ್ನೇಹಲತಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಐ. ಕ್ರಿಸ್ಟೋಫರ್ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ವಾಣಿಜ್ಯಶಾಸ್ತ್ರ ಉಪನ್ಯಾಸಕ ದೀಪಕ್ ಸ್ವಾಗತಿಸಿ, ಕನ್ನಡ ಉಪನ್ಯಾಸಕ ಉಮೇಶ್ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here