ಮೂವರನ್ನು ಕೊಂದು ಆರೋಪಿ ಆತ್ಮಹತ್ಯೆ
ಬೆಂಗಳೂರು : ನಗರದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದ ಭೀಕರ ಘಟನೆಯಲ್ಲಿ ವ್ಯಕ್ತಿಯೊಬ್ಬ ತನ್ನ ಮಾವ, ತಾಯಿ ಹಾಗೂ ಅಜ್ಜಿಯನ್ನು ಹತ್ಯೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಮೃತ ಆರೋಪಿ ಪ್ರಶಾಂತ್ ಕಳೆದ ಐದು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ ಮನೆಯೊಳಗೆ ತನ್ನ ಮಾವನೊಂದಿಗೆ ಗಲಾಟೆ ನಡೆಸಿದ್ದಾನೆ ಎನ್ನಲಾಗಿದೆ. ವಾಗ್ವಾದ ತಾರಕಕ್ಕೇರಿದ ವೇಳೆ ಪ್ರಶಾಂತ್ ತನ್ನ ಮಾವನನ್ನು ಕೊಲೆ ಮಾಡಿದ್ದಾನೆ.
ಗಲಾಟೆಯ ಶಬ್ದ ಕೇಳಿ ಬಾಗಿಲು ತೆರೆದ ತಾಯಿ ಹಾಗೂ ಅಜ್ಜಿ ಘಟನೆ ಏನೆಂದು ನೋಡಲು ಬಂದಾಗ, ಸಿಕ್ಕಿಬೀಳುವ ಭಯದಿಂದ ಅವರಿಬ್ಬರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಕೃತ್ಯದ ಬಳಿಕ ಆರೋಪಿ ಪರಾರಿಯಾಗಲು ಯತ್ನಿಸಿದ್ದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ಮನೆಯ ಹೊರಗಿನಿಂದ ಬಾಗಿಲು ಹಾಕಿ 112 ತುರ್ತುಸೇವೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಗಮಿಸುತ್ತಿರುವ ವಿಷಯ ತಿಳಿದ ಬಳಿಕ ಸಿಕ್ಕಿಬೀಳುವ ಭಯದಿಂದ ಪ್ರಶಾಂತ್ ಮನೆಯೊಳಗೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಗಿಲು ತೆರೆದಾಗ ನಾಲ್ವರು ಮೃತಪಟ್ಟಿರುವುದು ಪತ್ತೆಯಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಆರೋಪಿಯು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಹಿನ್ನೆಲೆ ಈ ಕೃತ್ಯ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದು, ನಿಖರ ಕಾರಣ ತನಿಖೆಯ ಬಳಿಕವೇ ತಿಳಿದುಬರಲಿದೆ.

