ಕಾಸರಗೋಡು : ಉಡುಪಿಯಲ್ಲಿ ನ್ಯಾಯಾಲಯ ಇಲಾಖೆಯ ಉದ್ಯೋಗಿ, ಉಡುಪಿ ಜಿಲ್ಲಾ ಬರಹಗಾರರ ಸಂಘದ ಅಧ್ಯಕ್ಷೆ, ಸಾಹಿತಿ ಪುಷ್ಪಾ ಪ್ರಸಾದ್ ಅವರಿಗೆ ಕಾಸರಗೋಡಿನ ಕನ್ನಡ ಭವನ ಮತ್ತು ಗ್ರಂಥಾಲಯ ನೀಡುವ ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ-2026 ಪ್ರದಾನ ಮಾಡಲಾಗುವುದು. ಇದೇ ಜು.26ರಂದು ಕಾಸರಗೋಡಿನ ಕನ್ನಡ ಭವನದ ಬಯಲು ರಂಗ ಮಂದಿರದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಡಾ. ಸಿ. ಸೋಮಶೇಖರ ಐ ಎ ಎಸ್ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ‘ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ’ದಲ್ಲಿ ಈ ಗೌರವ ಪ್ರದಾನ ನಡೆಯಲಿದೆ. ಕಾಸರಗೋಡಿನ ಕನ್ನಡ ಭವನ ಪ್ರಕಾಶನ, ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿಯ ಸಹಕಾರದಲ್ಲಿ ಈ ಸಮ್ಮೇಳನ ನಡೆಯಲಿದೆ. ಇವರು ಬರೆದ ‘ಒಸಗೆಯ ಎಸಳು’ (ಕವನ ಸಂಕಲನ). ಭಾವ ನೈವೇದ್ಯ (ಕವನಗಳು), ಹೆಜ್ಜೆ ತಾಳದ ಗೆಜ್ಜೆ ಘಲಿರು(ಕವನಗಳು), ನಕ್ಷತ್ರ ಪುಂಜ (ಲೇಖನಗಳು) ಪುಟಾಣಿ ಸ್ವರ್ಗ (ನೀತಿ ಕಥೆಗಳು), ಸೃಷ್ಟಿಯ ತೋರಣ (ನ್ಯಾನೋ ಕಥೆಗಳು ), ಗುಡಿಗಾರ (ಮಾಹಿತಿಯುಕ್ತ ಲೇಖನ ), ದಿವ್ಯಾಕ್ಷರಿ (ಲೇಖನಗಳು ), ಸುಖ ಧರೆ (ಕವನ ಸಂಕಲನ ) ಪ್ರಕಟಗೊಂಡಿವೆ. ಅಷ್ಟೇ ಅಲ್ಲದೇ ಇವರ ಬರಹಗಳು ಅನೇಕ ಪತ್ರಿಕೆಗಳಲ್ಲಿ, ಮ್ಯಾಗಜಿನ್ ಗಳಲ್ಲಿ ಪ್ರಕಟಗೊಂಡಿವೆ. ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. .ಇವರಿಗೆ ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರ, ಬಹುಮಾನಗಳು, ಪ್ರಶಂಸೆಗಳು ದೊರಕಿರುತ್ತವೆ. ಆನ್ಲೈನ್ ಫೇಸ್ಬುಕ್ ನಡೆಸುವ ಇಂಟರ್ ನ್ಯಾಷನಲ್ ವಿಮೆನ್ ಐಕಾನ್ ಆಗಿಯೂ ಪ್ರಶಸ್ತಿ ಪಡೆದಿದ್ದಾರೆ. ಇವರ ಯಕ್ಷಲೋಕ ಕವನವು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಗಿದೆ ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ ಎನ್ ವೆಂಕಟ್ರಮಣ ಹೊಳ್ಳ ಹಾಗೂ ಕಾಸರಗೋಡಿನ ಕನ್ನಡ ಭವನದ ಸ್ಥಾಪಕಾಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

