ಮಳೆಗಾಲದ ಅಲೆಗಳೊಂದಿಗೆ ತೇಲಿ ಬಂದ ಬಿಳಿ ನೊರೆ..!

0
49

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸಸಿಹಿತ್ತು ಕಡಲತೀರದಲ್ಲಿ ಮಳೆಗಾಲದ ಅಲೆಗಳ ನಡುವೆ ನಿಗೂಢವಾಗಿ ಬಿಳಿ ನೊರೆ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಕುತೂಹಲದ ಜೊತೆಗೆ ಆತಂಕಕ್ಕೂ ಕಾರಣವಾಗಿದೆ.

ಕೆಲವು ದಿನಗಳ ಹಿಂದೆ ಕುಂದಾಪುರ ಕರಾವಳಿ ಭಾಗದಲ್ಲಿ ಮೊದಲ ಬಾರಿಗೆ ಕಂಡುಬಂದಿದ್ದ ಈ ಬಿಳಿ ನೊರೆ ಇದೀಗ ಸಸಿಹಿಟ್ಟು ಕರಾವಳಿಯಲ್ಲಿಯೂ ಕಾಣಿಸಿಕೊಂಡಿದೆ. ಸಮುದ್ರದ ಅಲೆಗಳೊಂದಿಗೆ ತೀರಕ್ಕೆ ತಲುಪುತ್ತಿರುವ ನೊರೆಯನ್ನು ಬಲವಾದ ಗಾಳಿ ಎಲ್ಲೆಡೆ ಚದುರಿಸುತ್ತಿದ್ದು, ಅದು ಬಲೂನ್‌ಗಳಂತೆ ಗಾಳಿಯಲ್ಲಿ ತೇಲುತ್ತಿರುವ ದೃಶ್ಯಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ. ಕೆಲ ಮಕ್ಕಳು ಹಾಗೂ ಸ್ಥಳೀಯರು ಈ ನೊರೆಯೊಂದಿಗೆ ಆಟವಾಡುತ್ತಿರುವುದು ಕೂಡ ಕಂಡುಬಂದಿದೆ.

ತಜ್ಞರ ಪ್ರಕಾರ, ಇದು ಸಮುದ್ರದಲ್ಲಿ ನಡೆಯುವ ನೈಸರ್ಗಿಕ ಪ್ರಕ್ರಿಯೆಗಳ ಪರಿಣಾಮವಾಗಿರುವ ಸಾಧ್ಯತೆ ಹೆಚ್ಚಿದೆ. ಸಮುದ್ರದ ನೀರಿನಲ್ಲಿರುವ ಸಾವಯವ ಪದಾರ್ಥಗಳು, ಪಾಚಿ, ಸಸ್ಯಗಳ ಅವಶೇಷಗಳು ಹಾಗೂ ಪ್ರಬಲ ಅಲೆಗಳ ಚಲನೆಯಿಂದ ಇಂತಹ ನೊರೆ ರೂಪುಗೊಳ್ಳಬಹುದು. ಮಳೆಗಾಲದಲ್ಲಿ ನದಿಗಳ ಮೂಲಕ ಸಮುದ್ರ ಸೇರುವ ಮಣ್ಣು, ಸಾವಯವ ತ್ಯಾಜ್ಯ ಮತ್ತು ಖನಿಜಗಳು ನೀರಿನೊಂದಿಗೆ ಬೆರೆತು ಅಲೆಗಳ ಹೊಡೆತದಿಂದ ಬಿಳಿ ನೊರೆ ನಿರ್ಮಾಣವಾಗುವುದು ಸಾಮಾನ್ಯ ಎಂದು ಅವರು ತಿಳಿಸಿದ್ದಾರೆ.

ಆದರೆ ಕೈಗಾರಿಕಾ ತ್ಯಾಜ್ಯ ಅಥವಾ ರಾಸಾಯನಿಕ ಪದಾರ್ಥಗಳ ಪ್ರಭಾವವನ್ನೂ ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನೊರೆಯ ಬಣ್ಣ, ವಾಸನೆ, ರಾಸಾಯನಿಕ ಸಂಯೋಜನೆ ಹಾಗೂ ಅದರ ಸ್ವಭಾವವನ್ನು ವೈಜ್ಞಾನಿಕವಾಗಿ ಪರೀಕ್ಷಿಸಿದ ಬಳಿಕವೇ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ಇಂತಹ ಸಮುದ್ರದ ನೊರೆ ಅಪಾಯಕಾರಿಯಲ್ಲ. ಆದರೂ ಅದರ ಮೂಲ ಸ್ಪಷ್ಟವಾಗುವವರೆಗೆ ಸಾರ್ವಜನಿಕರು ನೇರ ಸಂಪರ್ಕವನ್ನು ತಪ್ಪಿಸಿಕೊಳ್ಳುವುದು ಒಳಿತು ಎಂದು ತಜ್ಞರು ಸಲಹೆ ನೀಡಿದ್ದಾರೆ. ವಿಶೇಷವಾಗಿ ಮಕ್ಕಳು ಹಾಗೂ ಚರ್ಮದ ಅಲರ್ಜಿ ಇರುವವರು ಈ ನೊರೆಯೊಂದಿಗೆ ಆಟವಾಡದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದಾರೆ.

ಸಮುದ್ರ ಮಾಲಿನ್ಯ ಹೆಚ್ಚಾದರೆ ಅದರ ಮೊದಲ ಪರಿಣಾಮ ಜಲಚರಗಳ ಮೇಲೆ ಬೀಳುತ್ತದೆ. ಮೀನುಗಳು ಸಾಮೂಹಿಕವಾಗಿ ಸಾಯುವುದು, ಸಮುದ್ರದ ನೀರಿನಲ್ಲಿ ದುರ್ವಾಸನೆ ಅಥವಾ ಬಣ್ಣ ಬದಲಾವಣೆ ಕಂಡುಬಂದರೆ ತಕ್ಷಣವೇ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಬೇಕು ಎಂದು ತಜ್ಞರು ತಿಳಿಸಿದ್ದಾರೆ. ಸದ್ಯ ಕರಾವಳಿಯಲ್ಲಿ ಇಂತಹ ಯಾವುದೇ ಅಸಾಮಾನ್ಯ ಬೆಳವಣಿಗೆಗಳು ವರದಿಯಾಗಿಲ್ಲ. ಸ್ಥಳೀಯ ಮೀನುಗಾರರ ಮಾಹಿತಿಯ ಪ್ರಕಾರವೂ ಮೀನುಗಳ ಸಾಮೂಹಿಕ ಸಾವಿನಂತಹ ಘಟನೆಗಳು ಕಂಡುಬಂದಿಲ್ಲ.