ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜೆನೆರಿಕ್ ಔಷಧಗಳ ಆಮದು ಮೇಲೆ ಭವಿಷ್ಯದಲ್ಲಿ ಭಾರೀ ಪ್ರಮಾಣದ ಸುಂಕ (ಟ್ಯಾರಿಫ್) ವಿಧಿಸುವ ಯೋಜನೆಯನ್ನು ಪ್ರಕಟಿಸಿದ್ದು, ಭಾರತದ ಫಾರ್ಮಾ ಉದ್ಯಮದಲ್ಲಿ ಆತಂಕ ಮೂಡಿಸಿದೆ.
ಟ್ರಂಪ್ ಅವರು ತಮ್ಮ ಸಾಮಾಜಿಕ ಜಾಲತಾಣ ಟ್ರೂತ್ ಸೋಷಿಯಲ್ ಮೂಲಕ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, 2026ರ ಆಗಸ್ಟ್ 1ರಿಂದ 2028ರ ಜುಲೈ 31ರವರೆಗೆ ಜೆನೆರಿಕ್ ಔಷಧಗಳ ಆಮದು ಮೇಲೆ ಯಾವುದೇ ಟ್ಯಾರಿಫ್ ವಿಧಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಆದರೆ, 2028ರ ಆಗಸ್ಟ್‌ನಿಂದ ಒಂದು ವರ್ಷದವರೆಗೆ ಶೇ.100ರಷ್ಟು ಸುಂಕ ಹಾಗೂ 2029ರ ಆಗಸ್ಟ್‌ನಿಂದ ಶೇ.200ರಷ್ಟು ಟ್ಯಾರಿಫ್ ಜಾರಿಯಾಗಲಿದೆ ಎಂದು ಘೋಷಿಸಿದ್ದಾರೆ.
ಅಮೆರಿಕದಲ್ಲೇ ಔಷಧ ಉತ್ಪಾದನೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಎರಡು ವರ್ಷಗಳ ವಿನಾಯಿತಿ ಅವಧಿಯಲ್ಲಿ ವಿದೇಶಿ ಔಷಧ ಕಂಪನಿಗಳು ಅಮೆರಿಕದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಭಾರತದ ಫಾರ್ಮಾ ಉದ್ಯಮಕ್ಕೆ ಏಕೆ ಆತಂಕ?
ಭಾರತವನ್ನು ವಿಶ್ವದ “ಫಾರ್ಮಸಿ” ಎಂದು ಕರೆಯಲಾಗುತ್ತಿದ್ದು, ಜೆನೆರಿಕ್ ಔಷಧ ಉತ್ಪಾದನೆಯಲ್ಲಿ ಭಾರತೀಯ ಕಂಪನಿಗಳು ಮುಂಚೂಣಿಯಲ್ಲಿವೆ. 2024–25ನೇ ಹಣಕಾಸು ವರ್ಷದಲ್ಲಿ ಸುಮಾರು 30 ಬಿಲಿಯನ್ ಅಮೆರಿಕನ್ ಡಾಲರ್ (ಅಂದಾಜು ₹2.7 ಲಕ್ಷ ಕೋಟಿ) ಮೌಲ್ಯದ ಔಷಧಗಳನ್ನು ಭಾರತ ರಫ್ತು ಮಾಡಿದೆ. ಇದರಲ್ಲಿ ಶೇ.30ಕ್ಕೂ ಅಧಿಕ ರಫ್ತು ಅಮೆರಿಕಕ್ಕೆ ಆಗಿದ್ದು, ಅದರ ಬಹುಪಾಲು ಜೆನೆರಿಕ್ ಔಷಧಗಳೇ ಆಗಿವೆ.
ಈ ಹಿನ್ನೆಲೆಯಲ್ಲಿ ಟ್ರಂಪ್ ಅವರ ಹೊಸ ಟ್ಯಾರಿಫ್ ಯೋಜನೆ ಭಾರತೀಯ ಔಷಧ ರಫ್ತು ಉದ್ಯಮಕ್ಕೆ ದೊಡ್ಡ ಸವಾಲಾಗಿ ಪರಿಣಮಿಸುವ ಸಾಧ್ಯತೆಯಿದೆ. ಸನ್ ಫಾರ್ಮಾ, ಡಾಕ್ಟರ್ ರೆಡ್ಡೀಸ್ ಲ್ಯಾಬೊರೇಟರೀಸ್, ಅರಬಿಂದೋ ಫಾರ್ಮಾ, ಸಿಪ್ಲಾ, ಲುಪಿನ್ ಹಾಗೂ ಗ್ಲ್ಯಾಂಡ್ ಫಾರ್ಮಾ ಸೇರಿದಂತೆ ಅಮೆರಿಕದ ಮಾರುಕಟ್ಟೆಯನ್ನು ಅವಲಂಬಿಸಿರುವ ಹಲವು ಭಾರತೀಯ ಕಂಪನಿಗಳ ಮೇಲೆ ಇದರ ಪರಿಣಾಮ ಬೀಳುವ ಸಾಧ್ಯತೆ ಇದೆ.
ಮುಂದಿನ ಹೆಜ್ಜೆ ಏನು?
ಟ್ರಂಪ್ ಸರ್ಕಾರದ ಈ ನಿರ್ಧಾರದಿಂದ ಭಾರತೀಯ ಫಾರ್ಮಾ ಕಂಪನಿಗಳು ಅಮೆರಿಕದಲ್ಲಿ ಹೂಡಿಕೆ ಹೆಚ್ಚಿಸುವುದು ಅಥವಾ ಇತರ ದೇಶಗಳ ಮಾರುಕಟ್ಟೆಗಳಲ್ಲಿ ರಫ್ತು ವಿಸ್ತರಿಸುವಂತಹ ಪರ್ಯಾಯ ಮಾರ್ಗಗಳನ್ನು ಹುಡುಕಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

