ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ‘ಕರಾವಳಿ’ ಚಿತ್ರದ ಪ್ರೀಮಿಯರ್ ಪ್ರದರ್ಶನಕ್ಕೆ ವಿವಿಧೆಡೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದಾವಣಗೆರೆಯಲ್ಲಿ ನಡೆದ ವಿಶೇಷ ಪ್ರದರ್ಶನದಲ್ಲಿ ಸಿನಿಪ್ರೇಮಿಗಳು ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಕಥೆಯೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡ ಅನುಭವ ಹಂಚಿಕೊಂಡಿದ್ದು, ಹಲವು ದೃಶ್ಯಗಳು ಮೈಯಲ್ಲಿ ಗೂಸ್‌ಬಂಪ್ಸ್ ಮೂಡಿಸಿದವು ಎಂದು ಅಭಿಪ್ರಾಯಪಟ್ಟಿದ್ದಾರೆ.
ಚಿತ್ರದಲ್ಲಿನ ಪಾತ್ರವರ್ಗದ ಅಭಿನಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು, ವಿಶೇಷವಾಗಿ ಮಹಾಬಲನ ಪಾತ್ರವನ್ನು ಹಲವರು ಕೊಂಡಾಡಿದ್ದಾರೆ. ಇದುವರೆಗೆ ಹೆಚ್ಚಾಗಿ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಮಿತ್ರ ಅವರ ಅಭಿನಯ ಈ ಚಿತ್ರದಲ್ಲಿ ಹೊಸ ಆಯಾಮ ಮೂಡಿಸಿದ್ದು, “ನೆಕ್ಸ್ಟ್ ಲೆವೆಲ್” ಎಂದು ಸಿನಿಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಟ ಪ್ರಜ್ವಲ್ ದೇವರಾಜ್ ಅವರ ಅಭಿನಯವೂ ಪ್ರೇಕ್ಷಕರ ಗಮನ ಸೆಳೆದಿದ್ದು, ಇದು ಅವರ ವೃತ್ತಿಜೀವನದ ಉತ್ತಮ ಕಮ್‌ಬ್ಯಾಕ್ ಆಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ರಾಜ್ ಬಿ ಶೆಟ್ಟಿ ಅವರ ನೈಜ ಅಭಿನಯಕ್ಕೂ ಪ್ರೇಕ್ಷಕರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಗುರುದತ್ ಗಾಣಿಗ ನಿರ್ದೇಶನದ ‘ಕರಾವಳಿ’ ಸಿನಿಮಾ ಈಗಾಗಲೇ ಪ್ರೀಮಿಯರ್ ಪ್ರದರ್ಶನಗಳ ಮೂಲಕ ಉತ್ತಮ ಮಾತುಗಳನ್ನು ಗಳಿಸಿಕೊಂಡಿದ್ದು, ಬಿಡುಗಡೆಯ ನಂತರವೂ ಉತ್ತಮ ಯಶಸ್ಸು ಸಾಧಿಸುವ ನಿರೀಕ್ಷೆ ಮೂಡಿಸಿದೆ.

