ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಕರ್ನಾಟಕ ರಾಜ್ಯ ಕಾರ್ಯದರ್ಶಿಯಾಗಿ ಮಾಳ ಹರ್ಷೇಂದ್ರ ಜೈನ್ ನೇಮಕ

0
21

ಬೆಂಗಳೂರು : 2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆಯ ಜಾಗತಿಕ ಸಂಘಟನೆಯಾದ ತುಳುವ ಮಹಾಸಭೆ ಇಂಟರ್‌ನ್ಯಾಷನಲ್ನ ಕರ್ನಾಟಕ ರಾಜ್ಯ ಕಾರ್ಯದರ್ಶಿಯಾಗಿ ಹಿರಿಯ ಸಮಾಜಸೇವಕ, ಸಂಘಟಕ ಹಾಗೂ ಉದ್ಯಮಿ ಮಾಳ ಹರ್ಷೇಂದ್ರ ಜೈನ್ ಅವರನ್ನು ನೇಮಕ ಮಾಡಲಾಗಿದೆ.

ಮಾಳ ಹರ್ಷೇಂದ್ರ ಜೈನ್ ಅವರು ಹಲವು ದಶಕಗಳಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾರ್ವಜನಿಕ ಸೇವಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ವಿವಿಧ ಸಾಮಾಜಿಕ, ಧಾರ್ಮಿಕ ಹಾಗೂ ಸೇವಾ ಸಂಘಟನೆಗಳಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ರಕ್ತದಾನ, ಆರೋಗ್ಯ ಶಿಬಿರಗಳು, ವಿದ್ಯಾರ್ಥಿಗಳಿಗೆ ನೆರವು, ದೇವಾಲಯಗಳ ಜೀರ್ಣೋದ್ಧಾರ, ಬಡ ಮತ್ತು ನಿರ್ಗತಿಕರ ಸೇವೆ ಸೇರಿದಂತೆ ಅನೇಕ ಜನಪರ ಕಾರ್ಯಗಳ ಮೂಲಕ ಸಮಾಜದಲ್ಲಿ ವಿಶಿಷ್ಟ ಗೌರವ ಗಳಿಸಿದ್ದಾರೆ.

ಇತ್ತೀಚೆಗೆ ಮೂಡುಬಿದಿರೆಯ ಪ್ರತಿಷ್ಠಿತ ಎಕ್ಸಲೆಂಟ್ ಕಾಲೇಜು ವತಿಯಿಂದ ಆಯೋಜಿಸಲಾದ ಮಹಾವೀರ ಜನ್ಮ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಸಮಾಜಸೇವೆಯಲ್ಲಿನ ವಿಶಿಷ್ಟ ಕೊಡುಗೆಯನ್ನು ಪರಿಗಣಿಸಿ “ವರ್ಧಮಾನ ಮಹಾವೀರ ಶಾಂತಿ ಪ್ರಶಸ್ತಿ–2026” ನೀಡಿ ಗೌರವಿಸಲಾಯಿತು. ಅಲ್ಲದೆ ಗೆಳೆಯರ ಬಳಗ, ಕುಂದಾಪುರ ವತಿಯಿಂದ ಆಯೋಜಿಸಲಾದ “ಕುಂದಾಪುರ ಹಬ್ಬ–2026” ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟ, ಸಮಾಜಸೇವೆ ಹಾಗೂ 77ನೇ ಬಾರಿ ರಕ್ತದಾನ ಮಾಡಿದ ಅಪರೂಪದ ಸೇವೆಯನ್ನು ಗುರುತಿಸಿ “ನಮ್ಮೂರ ಹಬ್ಬ–2026” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಅವರ ಸುದೀರ್ಘ ಸಂಘಟನಾ ಅನುಭವ, ಸಮಾಜಸೇವೆ ಹಾಗೂ ತುಳು ಭಾಷೆ, ಸಂಸ್ಕೃತಿ ಮತ್ತು ಸಮುದಾಯದ ಅಭಿವೃದ್ಧಿಯ ಮೇಲಿನ ಬದ್ಧತೆಯನ್ನು ಪರಿಗಣಿಸಿ ತುಳುವ ಮಹಾಸಭೆ ಇಂಟರ್‌ನ್ಯಾಷನಲ್ನ ಅಂತರರಾಷ್ಟ್ರೀಯ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಹಾಗೂ ಕರ್ನಾಟಕ ರಾಜ್ಯಾಧ್ಯಕ್ಷ ದೇವೇಂದ್ರ ಹೆಗ್ಗಡೆ ಕೊಕ್ರಾಡಿ ಅವರು ಮಾಳ ಹರ್ಷೇಂದ್ರ ಜೈನ್ ಅವರನ್ನು ಕರ್ನಾಟಕ ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಳಿಸಿದ್ದಾರೆ.

2028ರ ತುಳುವ ಮಹಾಸಭೆಯ ಶತಮಾನೋತ್ಸವದ ಅಂಗವಾಗಿ ರಾಜ್ಯಾದ್ಯಂತ ಸಂಘಟನೆಯನ್ನು ಬಲಪಡಿಸುವುದು, ತುಳು ಭಾಷೆಯ ಬೆಳವಣಿಗೆ, ತುಳು ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆ, ಯುವಜನರನ್ನು ಸಂಘಟಿಸುವುದು ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂಬ ವಿಶ್ವಾಸವನ್ನು ಸಂಘಟನೆಯ ಮುಖಂಡರು ವ್ಯಕ್ತಪಡಿಸಿದ್ದಾರೆ.

ಈ ನೇಮಕವನ್ನು ತುಳುವರ್ಲ್ಡ್ ಫೌಂಡೇಶನ್ನ ಗೌರವಾಧ್ಯಕ್ಷ ಶ್ರೀ ಶ್ರೀ ಹರಿನಾರಾಯಣ ದಾಸ ಅಸ್ರಣ್ಣ, ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಕಾರ್ಯದರ್ಶಿ ವಸಂತ ರೈ ಕುತ್ತೆತ್ತೂರು ಹಾಗೂ ನಿರ್ದೇಶಕ ಡಾ. ರಾಜೇಶ್ ಕೃಷ್ಣ ಆಳ್ವ ಅವರು ಹರ್ಷದಿಂದ ಸ್ವಾಗತಿಸಿ, ಮಾಳ ಹರ್ಷೇಂದ್ರ ಜೈನ್ ಅವರಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ.