ಅರಂತೋಡು : ಅರಂತೋಡು ಸಮೀಪದ ಕುಲ್ಚಾರ್ ಬಳಿ ಬೈಕ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ದುರ್ಘಟನೆ ಬುಧವಾರ ರಾತ್ರಿ ನಡೆದಿದೆ.
ಮೃತರನ್ನು ಅರಂತೋಡು ಗ್ರಾಮದ ಬಿಳಿಯಾರು ಬನ ನಿವಾಸಿ ಸುಬ್ರಾಯ ಅವರ ಪುತ್ರ ಸಂತೋಷ್ (17) ಎಂದು ಗುರುತಿಸಲಾಗಿದೆ. ಅವರು ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು.
ಬುಧವಾರ ರಾತ್ರಿ ಕುಲ್ಚಾರ್ ಸಮೀಪ ಬೈಕ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಸಂತೋಷ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಶರತ್ ಅಡ್ಯಡ್ಕ ಅವರು ಸ್ಥಳೀಯರ ಸಹಕಾರದೊಂದಿಗೆ ಆಂಬ್ಯುಲೆನ್ಸ್ ಮೂಲಕ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಂತೋಷ್ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

