
ವಲ್ಲಿಂಗ್ಟರೋ (ಇಂಗ್ಲೆಂಡ್) : 10 ವರ್ಷದ ಬಾಲಕಿ ಸೇರಿದಂತೆ ಎಂಟು ಮಂದಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ 15 ವರ್ಷದ ಬಾಲಕನನ್ನು ಇಂಗ್ಲೆಂಡ್ನ ವಲ್ಲಿಂಗ್ಟರೋ ಯುವ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ನ್ಯಾಯಾಲಯದ ಮಾಹಿತಿಯಂತೆ, ದೂರು ನೀಡಿರುವ ಬಾಲಕಿಯರ ವಯಸ್ಸು ಘಟನೆ ನಡೆದ ಸಂದರ್ಭದಲ್ಲಿ 10ರಿಂದ 15 ವರ್ಷಗಳ ನಡುವೆ ಇತ್ತು. ಆರೋಪಿ ಅಪ್ರಾಪ್ತನಾಗಿರುವ ಕಾರಣ ಆತನ ಗುರುತನ್ನು ಕಾನೂನುಬದ್ಧವಾಗಿ ಬಹಿರಂಗಪಡಿಸಲಾಗಿಲ್ಲ.
2023ರಿಂದ 2025ರ ಅವಧಿಯಲ್ಲಿ ನಡೆದಿವೆ ಎನ್ನಲಾದ ಘಟನೆಗಳಿಗೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಅತ್ಯಾಚಾರ ಸೇರಿದಂತೆ ಒಟ್ಟು 22 ಆರೋಪಗಳು ದಾಖಲಾಗಿವೆ. ಇದರಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ, ಮಗುವಿನ ಅಶ್ಲೀಲ ಚಿತ್ರಗಳನ್ನು ತಯಾರಿಸಿದ ಹಾಗೂ ಹೊಂದಿದ್ದ ಆರೋಪಗಳೂ ಸೇರಿವೆ.
ಸುಮಾರು 20 ನಿಮಿಷಗಳ ಕಾಲ ನಡೆದ ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿ ಯಾವುದೇ ಆರೋಪವನ್ನು ಒಪ್ಪಿಕೊಳ್ಳಲಿಲ್ಲ ಅಥವಾ ನಿರಾಕರಿಸಲಿಲ್ಲ. ಬಳಿಕ ಪ್ರಕರಣವನ್ನು ಆಗಸ್ಟ್ 18ರಂದು ನಾರ್ಥಾಂಪ್ಟನ್ ಕ್ರೌನ್ ಕೋರ್ಟ್ಗೆ ವರ್ಗಾಯಿಸಲಾಯಿತು.
ತಾಯಿಯೊಂದಿಗೆ ನ್ಯಾಯಾಲಯಕ್ಕೆ ಹಾಜರಾದ ಬಾಲಕನಿಗೆ ಜಾಮೀನು ನೀಡಲಾಗಿದ್ದು, ಆರೋಪಿತ ಸಂತ್ರಸ್ತೆಯರನ್ನು ಸಂಪರ್ಕಿಸದಂತೆ ಹಾಗೂ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರೊಂದಿಗೆ ವಯಸ್ಕರ ಮೇಲ್ವಿಚಾರಣೆ ಇಲ್ಲದೆ ಸಂಪರ್ಕ ಹೊಂದದಂತೆ ಕಠಿಣ ಷರತ್ತುಗಳನ್ನು ವಿಧಿಸಲಾಗಿದೆ.
ಜಿಲ್ಲಾ ನ್ಯಾಯಾಧೀಶ ಅಮರ್ ಮೆಹ್ರಾ, “ಈ ಪ್ರಕರಣವು ಅತ್ಯಂತ ಗಂಭೀರವಾಗಿದ್ದು, ಯುವ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ಯೋಗ್ಯವಲ್ಲ” ಎಂದು ಹೇಳಿ, ಮುಂದಿನ ವಿಚಾರಣೆಗೆ ಪ್ರಕರಣವನ್ನು ಉನ್ನತ ನ್ಯಾಯಾಲಯಕ್ಕೆ ವರ್ಗಾಯಿಸಿದ್ದಾರೆ.
