ಆಟಿಡೊಂಜಿ ದಿನಾಚರಣೆಗೆ ತುಳುನಾಡ ರಕ್ಷಣಾ ವೇದಿಕೆ ಸಜ್ಜು : ಪೂರ್ವಭಾವಿ ಸಭೆ ಯಶಸ್ವಿ

0
31

ಉಡುಪಿ,ಜುಲೈ 26 : ತುಳುನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಜನಪದ ಆಚರಣೆಗಳ ಪ್ರತೀಕವಾಗಿರುವ ‘ಆಟಿಡೊಂಜಿ ದಿನ’ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಆಯೋಜಿಸುವ ನಿಟ್ಟಿನಲ್ಲಿ ತುಳುನಾಡ ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲಾ ಘಟಕದ ಪೂರ್ವಭಾವಿ ಸಭೆಯು ಜುಲೈ 26 (ಭಾನುವಾರ) ರಂದು ಉಡುಪಿಯ ಕಾಪಿಯಾ ಹೋಟೆಲ್ ಸಮೀಪದ ಅಕ್ಷಯ ಟವರ್ಸ್‌ನಲ್ಲಿರುವ ಜಿಲ್ಲಾ ಕಚೇರಿಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷ ಫ್ರಾಂಕಿ ಡಿಸೋಜಾ ಕೊಳಲಗಿರಿ ವಹಿಸಿದ್ದರು. ಆಟಿಡೊಂಜಿ ದಿನಾಚರಣೆಯನ್ನು ಯಶಸ್ವಿಗೊಳಿಸಲು ಅಗತ್ಯ ಸಿದ್ಧತೆಗಳು, ಕಾರ್ಯಕ್ರಮದ ರೂಪುರೇಷೆ, ವಿವಿಧ ಜವಾಬ್ದಾರಿಗಳ ಹಂಚಿಕೆ ಹಾಗೂ ಸದಸ್ಯರ ಪಾತ್ರದ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಫ್ರಾಂಕಿ ಡಿಸೋಜಾ ಕೊಳಲಗಿರಿ ಅವರು, ತುಳುನಾಡಿನ ಆಚಾರ-ವಿಚಾರ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಆಟಿಡೊಂಜಿ ದಿನಾಚರಣೆಯಂತಹ ಕಾರ್ಯಕ್ರಮಗಳು ಅತ್ಯಂತ ಮಹತ್ವದ್ದಾಗಿದ್ದು, ಪ್ರತಿಯೊಬ್ಬ ಸದಸ್ಯರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಅವರು ಸಂಘಟನೆಯ ಬೆಳವಣಿಗೆ, ಸದಸ್ಯತ್ವ ವಿಸ್ತರಣೆ, ಸಮಾಜಮುಖಿ ಚಟುವಟಿಕೆಗಳು ಹಾಗೂ ಆಟಿಡೊಂಜಿ ದಿನಾಚರಣೆಯಲ್ಲಿ ಸದಸ್ಯರು ವಹಿಸಬೇಕಾದ ಜವಾಬ್ದಾರಿಗಳ ಕುರಿತು ವಿವರಿಸಿದರು.

ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಾಗಲಕ್ಷ್ಮಿ ಅವರು ಮಹಿಳಾ ಸದಸ್ಯರ ಸಕ್ರಿಯ ಭಾಗವಹಿಸುವಿಕೆ ಹಾಗೂ ಮುಂದಿನ ಕಾರ್ಯಕ್ರಮಗಳಲ್ಲಿ ಮಹಿಳಾ ಘಟಕದ ಪಾತ್ರವನ್ನು ಇನ್ನಷ್ಟು ಬಲಪಡಿಸುವ ಅಗತ್ಯವನ್ನು ಒತ್ತಿಹೇಳಿದರು.

ಸಭೆಯಲ್ಲಿ ಸಂಘಟನೆಯ ಅಭಿವೃದ್ಧಿ ಮತ್ತು ಬಲವರ್ಧನೆ, ಆಟಿಡೊಂಜಿ ದಿನಾಚರಣೆಯ ಸಮಗ್ರ ರೂಪುರೇಷೆ, ಸದಸ್ಯತ್ವ ವಿಸ್ತರಣೆ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಕಾರ್ಯಯೋಜನೆ ರೂಪಿಸುವುದು ಹಾಗೂ ಸಮಾಜಮುಖಿ, ಸಾಂಸ್ಕೃತಿಕ ಮತ್ತು ಜನಪರ ಕಾರ್ಯಕ್ರಮಗಳ ಆಯೋಜನೆ ಕುರಿತು ಚರ್ಚಿಸಲಾಯಿತು.

ಸಭೆಯ ವಿಶೇಷ ಆಕರ್ಷಣೆಯಾಗಿ ಮಣಿಪಾಲ ನೇತಾಜಿ ನಗರದ ರೇಷ್ಮಾ ಅವರನ್ನು ತುಳುನಾಡ ರಕ್ಷಣಾ ವೇದಿಕೆಯ ಜಿಲ್ಲಾ ಮಹಿಳಾ ಘಟಕಕ್ಕೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಯಿತು. ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಾಗಲಕ್ಷ್ಮಿ ಅವರು ಜಿಲ್ಲಾ ಅಧ್ಯಕ್ಷ ಫ್ರಾಂಕಿ ಡಿಸೋಜಾ ಕೊಳಲಗಿರಿ ಅವರ ಸಮ್ಮುಖದಲ್ಲಿ ಸಾಂಪ್ರದಾಯಿಕ ಸೂರ್ಯ-ಚಂದ್ರ ಶಾಲು ಹೊದಿಸಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಾಗಲಕ್ಷ್ಮಿ, ಬ್ರಹ್ಮಾವರ ತಾಲೂಕು ಅಧ್ಯಕ್ಷ ಶರತ್ ರಾಜ್ ಆರೂರು, ಜಿಲ್ಲಾ ಪ್ರಧಾನ ಸಹ ಕಾರ್ಯದರ್ಶಿ ಪ್ರೀತಂ, ಜಿಲ್ಲಾ ಸಂಘಟನಾ ಸಹ ಕಾರ್ಯದರ್ಶಿ ಕೃಷ್ಣ, ಜಿಲ್ಲಾ ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ರೋಷನ್ ಡಿಸೋಜಾ ಅಮುಂಜಿ, ಜಿಲ್ಲಾ ಮಹಿಳಾ ಸಂಘಟನಾ ಕಾರ್ಯದರ್ಶಿ ನಿರ್ಮಲ ಮೆಂಡನ್, ಜಿಲ್ಲಾ ಮಹಿಳಾ ಸಂಘಟನಾ ಸಹ ಕಾರ್ಯದರ್ಶಿ ಮಮತಾ, ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಮಂಜುಳಾ, ಜಿಲ್ಲಾ ಕ್ರೀಡಾ ಘಟಕದ ಅಧ್ಯಕ್ಷೆ ವೀಣಾ ಪ್ರಾಣೇಶ್, ಸದಸ್ಯರಾದ ಗುಲಾಬಿ, ಜ್ಯೋತಿ ಆರ್., ಶ್ಯಾಮಲಾ, ರೇಷ್ಮಾ, ಉಷಾ ಎಸ್. ಕೋಟ್ಯಾನ್, ಯುಕ್ತಾ ಆರ್. ಸೇರಿದಂತೆ ಅನೇಕ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಅವರು ವಂದನಾರ್ಪಣೆ ಸಲ್ಲಿಸಿ, ಜಿಲ್ಲೆಯಲ್ಲಿ ಆಟಿಡೊಂಜಿ ದಿನಾಚರಣೆಯನ್ನು ಮಾದರಿ ಕಾರ್ಯಕ್ರಮವನ್ನಾಗಿ ರೂಪಿಸಲು ಎಲ್ಲ ಸದಸ್ಯರು ಒಗ್ಗಟ್ಟಿನಿಂದ ಶ್ರಮಿಸುವಂತೆ ಕರೆ ನೀಡಿದರು.