ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರತಿಷ್ಠಿತ ರಾಷ್ಟ್ರಮಟ್ಟದ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ನುಡಿಸಿರಿ–ವಿರಾಸತ್’ ಅನ್ನು 2027ರ ಜನವರಿಯಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ.
ಈ ಕುರಿತು ಆಳ್ವಾಸ್ ನುಡಿಸಿರಿ–ವಿರಾಸತ್‌ನ ರೂವಾರಿ ಡಾ. ಎಂ. ಮೋಹನ ಆಳ್ವ ಅವರ ಸ್ವಗೃಹದಲ್ಲಿ ಭಾನುವಾರ ನಡೆದ ಮೊದಲ ಸಮಾಲೋಚನಾ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಿತು. ಈ ಬಾರಿ ಆಳ್ವಾಸ್ ನುಡಿಸಿರಿ ಮತ್ತು ಆಳ್ವಾಸ್ ವಿರಾಸತ್ ಉತ್ಸವಗಳನ್ನು ಒಂದೇ ಅವಧಿಯಲ್ಲಿ ಸಂಯುಕ್ತವಾಗಿ ಆಯೋಜಿಸುವ ನಿರ್ಧಾರ ಕೈಗೊಳ್ಳಲಾಯಿತು.
ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಎಂ. ಮೋಹನ ಆಳ್ವ ಅವರು, ಪ್ರತಿವರ್ಷ ಹೊಸ ಆಲೋಚನೆಗಳು, ಹೊಸ ಪರಿಕಲ್ಪನೆಗಳು ಹಾಗೂ ಹೊಸ ತಲೆಮಾರಿನ ಸಕ್ರಿಯ ಭಾಗವಹಿಸುವಿಕೆಗೆ ಆದ್ಯತೆ ನೀಡುತ್ತಾ ಉತ್ಸವವನ್ನು ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದರು.
2027ರ ಜನವರಿಯಲ್ಲಿ ನಡೆಯಲಿರುವ ಉತ್ಸವದಲ್ಲಿ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಅನಾವರಣಗೊಳಿಸುವ ಜೊತೆಗೆ ಯುವಜನತೆ, ಕನ್ನಡದ ಭವಿಷ್ಯ, ದೇಶೀಯತೆ, ಪರಿಸರ ಸಂರಕ್ಷಣೆ, ಸಹಬಾಳ್ವೆ ಹಾಗೂ ಸಮಕಾಲೀನ ಸಾಮಾಜಿಕ ವಿಚಾರಗಳ ಕುರಿತು ಗಂಭೀರ ಚರ್ಚೆಗಳು, ಸಂವಾದಗಳು ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ರಾಷ್ಟ್ರದ ವಿವಿಧ ರಾಜ್ಯಗಳಿಂದ ಸಾಹಿತ್ಯಾಸಕ್ತರು, ಚಿಂತಕರು, ಕಲಾವಿದರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದಿಂದ ಉತ್ಸವದ ರೂಪುರೇಷೆ ಸಿದ್ಧಪಡಿಸಲಾಗುತ್ತಿದ್ದು, ಈ ಬಾರಿಯ ನುಡಿಸಿರಿ–ವಿರಾಸತ್ ಉತ್ಸವವು ಮತ್ತಷ್ಟು ವೈಶಿಷ್ಟ್ಯಪೂರ್ಣ ಹಾಗೂ ಅರ್ಥಪೂರ್ಣವಾಗಿ ನಡೆಯಲಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

