ಎಸ್‌ ಸಿ ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ 27ನೇ ಕಾರ್ಗಿಲ್ ವಿಜಯ್ ದಿವಸ್ ಸ್ಮರಣಾ ಕಾರ್ಯಕ್ರಮ

0
14

ಮಂಗಳೂರು : ನಗರದ ಎಸ್‌ ಸಿ ಎಸ್ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕಲ್ಯಾಣ ಮಂಡಳಿ ವತಿಯಿಂದ 2026ರ ಜುಲೈ 27ರಂದು ಮಧ್ಯಾಹ್ನ 2.00 ಗಂಟೆಗೆ ಉಪನ್ಯಾಸ ಕೊಠಡಿ 12ರಲ್ಲಿ 27ನೇ ಕಾರ್ಗಿಲ್ ವಿಜಯ ದಿವಸವನ್ನು ಅತ್ಯಂತ ಗೌರವಪೂರ್ವಕವಾಗಿ ಆಚರಿಸಲಾಯಿತು.

ಕಾರ್ಯಕ್ರಮವು ಸಂಸ್ಥೆಯ ಗೀತೆಯೊಂದಿಗೆ ಆರಂಭಗೊಂಡಿತು. ಬಳಿಕ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಹಾಗೂ ವಿದ್ಯಾರ್ಥಿ ಕಲ್ಯಾಣ ಮಾರ್ಗದರ್ಶಕರಾದ ಶ್ರೀಮತಿ ಮಧುಮತಿ ಜೆ. ರಾಜ ಅವರು ಕಾರ್ಗಿಲ್ ವಿಜಯ್ ದಿವಸದ ಮಹತ್ವ ಹಾಗೂ ಭಾರತೀಯ ಸಶಸ್ತ್ರ ಪಡೆಗಳ ಶೌರ್ಯವನ್ನು ವಿವರಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಂತರ ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ವಂದನಾ ಅವರು ಕಾರ್ಗಿಲ್ ವಿಜಯ್ ದಿವಸ್ ನ ಕುರಿತು ಗೌರವಗೀತೆಯನ್ನು ಭಾವಪೂರ್ಣವಾಗಿ ಹಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಅವರು ದೇಶಸೇವೆ, ಶಿಸ್ತು, ರಾಷ್ಟ್ರಭಕ್ತಿ ಹಾಗೂ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಯೋಧರು ತೋರಿದ ಅಪ್ರತಿಮ ಸಾಹಸದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಸಂದೇಶ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಹಾರ್ದಿಕ್ ಪಿ. ಚೌಹಾಣ್ ಅಧ್ಯಕ್ಷೀಯ ಭಾಷಣದಲ್ಲಿ ರಾಷ್ಟ್ರೀಯ ಏಕತೆ, ಅಖಂಡತೆ ಹಾಗೂ ದೇಶಸೇವೆಯ ಮೌಲ್ಯಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

ಫ್ಯಾಷನ್ ಡಿಸೈನ್ ವಿಭಾಗದ ಮುಖ್ಯಸ್ಥೆ ರಜಿತಾ ಮಧುರಾಜ್ ಅವರು ಕಾರ್ಗಿಲ್ ಯುದ್ಧದ ಪರಂವೀರ ಚಕ್ರ ಮತ್ತು ಮಹಾವೀರ ಚಕ್ರ ಪ್ರಶಸ್ತಿ ಪುರಸ್ಕೃತ ವೀರ ಯೋಧರ ಹೆಸರುಗಳನ್ನು ವಾಚಿಸಿದರು. ಬಳಿಕ ಹುತಾತ್ಮ ಯೋಧರ ಗೌರವಾರ್ಥ ಎರಡು ನಿಮಿಷಗಳ ಮೌನಾಚರಣೆ ನಡೆಸಲಾಯಿತು.

ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥ ಹಾಗೂ ವಿದ್ಯಾರ್ಥಿ ಕಲ್ಯಾಣ ಮಾರ್ಗದರ್ಶಕರಾದ ತಿಲಕ್ ಗೌಡ ಅವರು “ರಾಷ್ಟ್ರ ಮೊದಲು” ಪ್ರತಿಜ್ಞೆಯನ್ನು ಬೋಧಿಸಿದರು. ತೃತೀಯ ಬಿಸಿಎ ವಿದ್ಯಾರ್ಥಿ ಭೂಷಣ್ ಶೆಟ್ಟಿ ಸ್ವಾಗತ ಭಾಷಣ ಮಾಡಿದರು ,ತೃತೀಯ ಬಿಸಿಎ ವಿದ್ಯಾರ್ಥಿನಿ ಕುಮಾರಿ ರೀಶಲ್ ಡಿ’ಸೋಜಾ ವಂದನಾರ್ಪಣೆ ಸಲ್ಲಿಸಿದರು. ತೃತೀಯ ಬಿ. ಕಾಂ ವಿದ್ಯಾರ್ಥಿನಿ ಅಪೂರ್ವ ಕಾರ್ಯಕ್ರಮ ನಿರೂಪಣೆ ಮಾಡಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಸಮಾಪ್ತಿಯಾಯಿತು.

ಈ ಸ್ಮರಣಾ ಕಾರ್ಯಕ್ರಮವು ಕಾರ್ಗಿಲ್ ಯುದ್ಧದ ವೀರ ಯೋಧರ ತ್ಯಾಗ, ಶೌರ್ಯ ಹಾಗೂ ದೇಶಪ್ರೇಮವನ್ನು ಸ್ಮರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಕ್ತಿ, ದೇಶಸೇವೆ ಮತ್ತು ರಾಷ್ಟ್ರೀಯ ಜವಾಬ್ದಾರಿಯ ಮೌಲ್ಯಗಳನ್ನು ಬಲಪಡಿಸಿತು.