ಪಾಲಡ್ಕ ತ್ಯಾಜ್ಯ ವಿಲೇವಾರಿ ಘಟಕದ ಸಂಪರ್ಕ ರಸ್ತೆ ಹದಗೆಟ್ಟು ವಾಹನ ಸಂಚಾರಕ್ಕೆ ತೀವ್ರ ಅಡಚಣೆ

0
28

ಮೂಡುಬಿದಿರೆ : ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಂಪರ್ಕ ಕಲ್ಪಿಸುವ ಪೂಪಾಡಿಕಲ್ಲು 5 ಸೆಂಟ್ಸ್ ಕಾಲೋನಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಮಳೆಗಾಲದಲ್ಲಿ ಕೆಸರುಮಯವಾಗಿ ವಾಹನ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸುಮಾರು 45 ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ರಸ್ತೆಗೆ ಇದುವರೆಗೆ ಡಾಮರೀಕರಣವಾಗಿಲ್ಲ. ಪರಿಣಾಮ ಮಳೆ ಬಂದಾಗ ರಸ್ತೆ ಸಂಪೂರ್ಣ ಕೆಸರಿನಿಂದ ಆವೃತವಾಗುತ್ತಿದ್ದು, ಶಾಲಾ ಮಕ್ಕಳು, ಮಹಿಳೆಯರು, ವಯೋವೃದ್ಧರು ಹಾಗೂ ಸಾರ್ವಜನಿಕರು ನಿತ್ಯ ಜೀವದ ಹಂಗು ತೊರೆದು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನ ಸೇರಿದಂತೆ ಇತರ ವಾಹನಗಳ ಸಂಚಾರವೂ ದುಸ್ತರವಾಗಿದೆ.

ರಸ್ತೆ ದುರಸ್ತಿ ಹಾಗೂ ಡಾಮರೀಕರಣಕ್ಕಾಗಿ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣೆ ವೇಳೆ ರಸ್ತೆ ಅಭಿವೃದ್ಧಿಯ ಭರವಸೆ ನೀಡುವ ಜನಪ್ರತಿನಿಧಿಗಳು ನಂತರ ಸಮಸ್ಯೆ ಕಡೆಗೆ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಪೂಪಾಡಿಕಲ್ಲು 5 ಸೆಂಟ್ಸ್ ಕಾಲೋನಿ ರಸ್ತೆ ಹಾಗೂ ಗ್ರಾಮ ಪಂಚಾಯಿತಿ ತ್ಯಾಜ್ಯ ವಿಲೇವಾರಿ ಘಟಕದ ಸಂಪರ್ಕ ರಸ್ತೆಯನ್ನು ತುರ್ತು ಆದ್ಯತೆಯ ಮೇರೆಗೆ ಅಭಿವೃದ್ಧಿಪಡಿಸಿ ಡಾಮರೀಕರಣಗೊಳಿಸುವ ಮೂಲಕ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ. ಅಭಿವೃದ್ಧಿ ಕಾಮಗಾರಿಗಳ ಕುರಿತು ಬ್ಯಾನರ್‌ಗಳು ಮಾತ್ರ ಕಾಣಿಸುತ್ತಿವೆ. ಆದರೆ ಸಾರ್ವಜನಿಕರಿಗೆ ಅಗತ್ಯವಾದ ಮೂಲಸೌಕರ್ಯಗಳ ಸಮಸ್ಯೆಗಳು ವರ್ಷಗಳ ಕಾಲ ಬಗೆಹರಿಯದೆ ಉಳಿದಿರುವುದು ಏಕೆ ಎಂಬ ಪ್ರಶ್ನೆಯನ್ನೂ ಸ್ಥಳೀಯರು ಎತ್ತಿದ್ದಾರೆ.

ವಿಶೇಷ ವರದಿ : ಜಗದೀಶ್ ಪೂಜಾರಿ, ಕಡಂದಲೆ