ಎಡನೀರು ಮಠದಲ್ಲಿ ಕರ್ನಾಟಕ–ಕೇರಳ ಸಾಂಸ್ಕೃತಿಕ ಸಂಭ್ರಮ

0
29

ಕಾಸರಗೋಡು : ಜಾಗೃತಿ ಟ್ರಸ್ಟ್ ಬೆಂಗಳೂರು, ಶ್ರೀಮದ್ ಎಡನೀರು ಮಠ ಹಾಗೂ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ.) ಕಾಸರಗೋಡು ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ–ಕೇರಳ ಸಾಂಸ್ಕೃತಿಕ ವೈಭವ ಹಾಗೂ ಅಭಿನಂದನಾ ಸಮಾರಂಭವು ಜುಲೈ 25ರಂದು ಕಾಸರಗೋಡಿನ ಎಡನೀರು ಮಠದ ಶಾಲಾ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಶ್ರೀಮದ್ ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಉದ್ಘಾಟಿಸಿದರು. ಬೆಂಗಳೂರು ಕಿಮ್ಸ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿವಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕರ್ನಾಟಕ ರಾಜ್ಯ ಸಂಚಾಲಕರಾದ ಹಾಗೂ ಸರ್ಕಾರಿ ಪ್ರೌಢಶಾಲೆ ಕಬಕದ ಶಿಕ್ಷಕಿ ಡಾ. ಶಾಂತಾ ಪುತ್ತೂರು, ಕನ್ನಡ ಸಾಹಿತ್ಯ ಪರಿಷತ್ ಕೇರಳ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಜಾಗೃತಿ ಟ್ರಸ್ಟ್ ಅಧ್ಯಕ್ಷ ಬಿ. ನಾಗೇಶ್, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯ ಕಟ್ಟೆ, ಶ್ರೀಮದ್ ಎಡನೀರು ಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ, ಮಹೇಶ್ ವಳಕುಂಜ, ಅಂತಾರಾಷ್ಟ್ರೀಯ ಕ್ರೀಡಾಪಟು ಡಾ. ಪ್ರಭಾಕರ ಎಸ್., ಲಕ್ಷ್ಮೀನಾಯ್ಡು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜಾಗೃತಿ ಟ್ರಸ್ಟ್ ವತಿಯಿಂದ ಪರಮಪೂಜ್ಯ ಸ್ವಾಮೀಜಿಯವರನ್ನು ಗೌರವಿಸಿ ಆಶೀರ್ವಾದ ಪಡೆಯಲಾಯಿತು. ಅಲ್ಲದೆ ಶ್ರೀಮದ್ ಎಡನೀರು ಮಠದ ವತಿಯಿಂದ ಜಾಗೃತಿ ಟ್ರಸ್ಟ್ ಅಧ್ಯಕ್ಷ ಬಿ. ನಾಗೇಶ್ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಶಿಕ್ಷಕಿ ಡಾ. ಶಾಂತಾ ಪುತ್ತೂರು, ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆಯ ಕಾರ್ಯದರ್ಶಿ ಗುರುರಾಜ್ ಕಾಸರಗೋಡು, ನಿವೃತ್ತ ಶಿಕ್ಷಕ ಸೂರ್ಯನಾರಾಯಣ ಭಟ್, ವೆಂಕಟ ಭಟ್ ಎಡನೀರು, ಉದ್ಯಮಿ ಸತೀಶ್ ರಾವ್ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಉದಯೋನ್ಮುಖ ಕಲಾವಿದರನ್ನು ಗೌರವಿಸಲಾಯಿತು. ಇದೇ ವೇಳೆ ಡಾ. ಕೆ.ಎನ್. ವೆಂಕಟರಮಣ ಹೊಳ್ಳ ಅವರಿಗೆ ‘ಗಡಿನಾಡ ಶ್ರೇಷ್ಠ ಸಮಾಜ ಸೇವಾ ರತ್ನ’ ಪ್ರಶಸ್ತಿಯನ್ನು ಪ್ರದಾನ ಮಾಡಿ ಸನ್ಮಾನಿಸಲಾಯಿತು.

ಬಳಿಕ ನಡೆದ ಕರ್ನಾಟಕ–ಕೇರಳ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆಯ ಕಲಾವಿದರು ನಯನಮನೋಹರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಭಾಗವಹಿಸಿದ ಕಲಾವಿದರಿಗೆ ಜಾಗೃತಿ ಟ್ರಸ್ಟ್ ವತಿಯಿಂದ ಸ್ಮರಣಿಕೆ ಹಾಗೂ ಅಭಿನಂದನಾ ಪತ್ರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮವನ್ನು ಯೋಗ ಗುರು ನಂದಾದೀಪ ಅವರು ನಿರೂಪಿಸಿದರು.