ಡಾ. ಶಿರೂರು ಅವರಿಗೆ ಕೈಯಾರ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

0
9

ಮೂಡುಬಿದಿರೆಯ ಹೋಲಿ ರೋಜರಿ ಪ್ರೌಢಶಾಲೆಯ ಕನ್ನಡ ಅಧ್ಯಾಪಕ, ಕನ್ನಡ ಸಾಹಿತ್ಯ ಪರಿಷತ್ತಿನ ಮೂಡುಬಿದರೆ ಹೋಬಳಿ ಘಟಕದ ಅಧ್ಯಕ್ಷರಾದ ಡಾ. ರಾಮಕೃಷ್ಣ ಶಿರೂರು ಅವರಿಗೆ ನಾಡೋಜ ಡಾಕ್ಟರ್ ಕಯ್ಯಾರ ಕಿಞ್ಞಣ್ಣ ರೈ ರಾಷ್ಟ್ರೀಯ ಸದ್ಭಾವನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನದಲ್ಲಿ ನಡೆದ ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನಮಾಡಿ ಗೌರವಿಸಲಾಯಿತು.
ಕಳೆದ ಮೂರು ದಶಕಗಳಿಂದ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಶಿರೂರು ಅವರು ಸಾಹಿತ್ಯ ಸೌರಭ ಮೂಡುಬಿದಿರೆಮತ್ತು ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನ ಮೂಡುಬಿದಿರೆ ಈ ಸಂಘಟನೆಯ ಮೂಲಕ ನೂರಾರು ಸಾಹಿತ್ಯ, ಸಂಗೀತ, ಯಕ್ಷಗಾನ, ನೃತ್ಯ, ರಂಗ ತರಬೇತಿ ಮತ್ತು ಪ್ರದರ್ಶನ ನಡೆಸುತ್ತಾ ಬಂದಿದ್ದಾರೆ.

ಕರ್ನಾಟಕ ರಾಜ್ಯ ಪ್ರೌಢಶಾಲಾ ಕನ್ನಡ ಶಿಕ್ಷಕರ ಸಂಘದ ತಾಲೂಕು ಜಿಲ್ಲೆ ಮತ್ತು ರಾಜ್ಯಮಟ್ಟದ ಸಂಘಟನೆಯಲ್ಲಿ ಅವರ ಸಾಧನೆಯನ್ನು ಗುರುತಿಸಿ ಕಯ್ಯಾರ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕಾಸರಗೋಡು ಕನ್ನಡ ಭವನದ ರೂವಾರಿಗಳಾದ ಡಾ. ವಾಮನ ಬೇಕಲ್, ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾ. ಪಿ.ಎಂ. ವೆಂಕಟರಮಣ ಹೊಳ್ಳ, ಸಮ್ಮೇಳನ ಅಧ್ಯಕ್ಷರಾದ ಸಿ. ಸೋಮಶೇಖರ ರಾವ್ ಐ.ಎ.ಎಸ್. ಮತ್ತು ಅತಿಥಿಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.