ತಲೆಯ ಮೇಲೆ ಕಲ್ಲು ಹಾಕಿ ಕೊಲೆ: ನ್ಯಾಯಾಲಯದಿಂದ ಕಠಿಣ ಶಿಕ್ಷೆ

0
33

ಕುಂದಾಪುರ : ಮೂರು ವರ್ಷಗಳ ಹಿಂದೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹರ್ಕೂರು ಗ್ರಾಮದಲ್ಲಿ ಮಲಗಿದ್ದ ವ್ಯಕ್ತಿಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದ ಪ್ರಕರಣದ ಆರೋಪಿಗೆ ಕುಂದಾಪುರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಜುಲೈ 29ರಂದು ತೀರ್ಪು ನೀಡಿದೆ.

ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿಯನ್ನು ರಾಜು ಎಂದು ಗುರುತಿಸಲಾಗಿದೆ.

ಪ್ರಕರಣದ ವಿವರದಂತೆ, 2023ರ ಮೇ 14ರಂದು ಕುಂದಾಪುರ ತಾಲೂಕಿನ ಹರ್ಕೂರು ಗ್ರಾಮದ ನಿವಾಸಿ ನಾಗರಾಜ ಆಚಾರಿ ಅವರು ಗಾರೆ ಕೆಲಸಕ್ಕಾಗಿ ಸಂಗೋದಪ್ಪ ಯಾನೆ ಸಂಗಮೇಶ ಎಂಬ ಮೇಸ್ತ್ರಿಯ ಮೂಲಕ ರಾಜುವನ್ನು ಕೆಲಸಕ್ಕೆ ಕರೆದುಕೊಂಡು ಹೋಗಿದ್ದರು. ರಾತ್ರಿ ವೇಳೆ ಸಂಬಳದ ವಿಚಾರವಾಗಿ ಸಂಗೋದಪ್ಪ ಮತ್ತು ರಾಜು ನಡುವೆ ಮಾತಿನ ಚಕಮಕಿ ನಡೆದು ಬಳಿಕ ಹೊಡೆದಾಟಕ್ಕೆ ತಿರುಗಿತ್ತು.

ಈ ವೇಳೆ ರಾಜು, ಸಮೀಪದಲ್ಲಿದ್ದ ಕೆಂಪು ಕಲ್ಲನ್ನು ಎತ್ತಿ ಸಂಗೋದಪ್ಪ ಅವರ ತಲೆಯ ಮೇಲೆ ಎಸೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಂದಿನ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ ಸಂತೋಷ ಕಾಯ್ಕಿಣಿ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ ಶೇಖ್ ಅವರು ಆರೋಪಿ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ತೀರ್ಮಾನಿಸಿ, ಭಾರತೀಯ ದಂಡ ಸಂಹಿತೆಯ (ಐಪಿಸಿ) 302ನೇ ಕಲಂ ಅಡಿ ಜೀವಾವಧಿ ಶಿಕ್ಷೆ ಹಾಗೂ ₹5,000 ದಂಡ ವಿಧಿಸಿದ್ದಾರೆ.

ಇದಲ್ಲದೆ, 504ನೇ ಕಲಂ ಅಡಿ ಒಂದು ವರ್ಷದ ಜೈಲು ಶಿಕ್ಷೆ ಹಾಗೂ ₹5,000 ದಂಡ, 506ನೇ ಕಲಂ ಅಡಿ ಒಂದು ವರ್ಷದ ಜೈಲು ಶಿಕ್ಷೆ ಹಾಗೂ ₹5,000 ದಂಡ, ಹಾಗೂ 324ನೇ ಕಲಂ ಅಡಿ ಒಂದು ವರ್ಷದ ಜೈಲು ಶಿಕ್ಷೆ ಹಾಗೂ ₹5,000 ದಂಡ ವಿಧಿಸಿ ಆದೇಶಿಸಿದ್ದಾರೆ.

ಮೂರು ವರ್ಷಗಳ ಕಾಲ ನಡೆದ ವಿಚಾರಣೆಯ ಬಳಿಕ ಹೊರಬಿದ್ದ ಈ ತೀರ್ಪಿನಿಂದ ಹರ್ಕೂರು ಕೊಲೆ ಪ್ರಕರಣಕ್ಕೆ ನ್ಯಾಯಾಂಗದ ಮಟ್ಟದಲ್ಲಿ ಅಂತ್ಯ ದೊರೆತಿದೆ.