ವಾಯ್ಸ್ ಆಫ್ ಆರಾಧನ – ತುಳುನಾಡು ವಾರ್ತೆ ಸಹಯೋಗದಲ್ಲಿ ‘ಸಾಂಸ್ಕೃತಿಕ ವೈಭವ’

0
23

ಮೂಡುಬಿದಿರೆ : ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ.) ಶ್ರೀ ಜೈನ ಮಠ ಮೂಡುಬಿದಿರೆ ಇದರ ದಿವ್ಯ ಸಹಾಯದೊಂದಿಗೆ ‘ವಾಯ್ಸ್ ಆಫ್ ಆರಾಧನ’ ಮತ್ತು ‘ತುಳುನಾಡು ವಾರ್ತೆ’ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಆಟಿಡೊಂಜಿ ದಿನ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ‘ಸಾಂಸ್ಕೃತಿಕ ವೈಭವ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

​ಈ ಕಾರ್ಯಕ್ರಮವು ಜಗದ್ಗುರು ಡಾ|| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿಯವರ ಅಮೃತ ಹಸ್ತ ಹಾಗೂ ಶುಭಾಶೀರ್ವಾದಗಳೊಂದಿಗೆ ನೆರವೇರಲಿದೆ.

​ಗ್ರಾಮೀಣ ಪ್ರತಿಭೆಗಳಿಗೆ ಬೆಳಕಾದ ‘ವಾಯ್ಸ್ ಆಫ್ ಆರಾಧನ’ ​’ವಾಯ್ಸ್ ಆಫ್ ಆರಾಧನ’ ತಂಡವು ಮೂಲತಃ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಒದಗಿಸುವಲ್ಲಿ ಮುಂಚೂಣಿಯಲ್ಲಿದೆ. ತೆರೆಮರೆಯಲ್ಲಿರುವ ಅಪಾರ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ, ಅವರನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪರಿಚಯಿಸಿದ ಹೆಗ್ಗಳಿಕೆ ಮತ್ತು ಕೀರ್ತಿ ಈ ಸಂಸ್ಥೆಗೆ ಸಲ್ಲುತ್ತದೆ.

ಈಗಾಗಲೇ ಸಾವಿರಾರು ಮಕ್ಕಳಿಗೆ ತಮ್ಮ ಸುಪ್ತ ಕಲಾ ನೈಪುಣ್ಯವನ್ನು ಪ್ರದರ್ಶಿಸಲು ಈ ತಂಡವು ಉತ್ತೇಜನಕಾರಿ ವೇದಿಕೆಯಾಗಿದೆ. ಈ ಮಹತ್ಕಾರ್ಯಕ್ಕೆ ಈಗ ‘ತುಳುನಾಡು ವಾರ್ತೆ’ ಬಳಗವು ಸಹಯೋಗ ನೀಡುತ್ತಾ ಕೈಜೋಡಿಸಿರುವುದು ಅತ್ಯಂತ ಶ್ಲಾಘನೀಯ ಹಾಗೂ ಅಭಿಮಾನದ ವಿಷಯವಾಗಿದೆ.

​ಕಾರ್ಯಕ್ರಮ ದಿನಾಂಕ: 02-08-2026 (ಭಾನುವಾರ) ಸಮಯ: ಬೆಳಿಗ್ಗೆ 10:00 ಗಂಟೆಗೆ, ಸ್ವಸ್ತಿಶ್ರೀ ಭಟ್ಟಾರಕ ಭವನ, ರಮಾ ರಾಣಿ ಶೋಧ ಸಂಸ್ಥಾನ ಕಟ್ಟಡ, ಸಾವಿರ ಕಂಬದ ಬಸದಿ ಬಳಿ, ಮೂಡುಬಿದಿರೆ ಇಲ್ಲಿ ಕಾರ್ಯಕ್ರಮ ನಡೆಯಲಿದೆ

​ಕಾರ್ಯಕ್ರಮ ನಿರ್ವಹಣೆ: ಶ್ರೇಯಾ ಸುಳ್ಯ

ನೇರ ಪ್ರಸಾರ:- ‘ತುಳುನಾಡು ವಾರ್ತೆ’ಯಲ್ಲಿ ಲೈವ್ ಪ್ರಸಾರಗೊಳ್ಳಲಿದೆ.

ಗ್ರಾಮೀಣ ಪ್ರತಿಭೆಗಳ ಪ್ರೋತ್ಸಾಹವೇ ಸಮಾಜದ ಪ್ರಗತಿ

​ಮುಖ್ಯವಾಗಿ ಇಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಸುಪ್ತ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವಂತಹ ವೇದಿಕೆಗಳು ಹೆಚ್ಚು ಹೆಚ್ಚಾಗಿ ಹುಟ್ಟಿಕೊಂಡಾಗ ಮಾತ್ರವೇ ಮಕ್ಕಳ ಸರ್ವತೋಮುಖ ಏಳಿಗೆ ಸಾಧ್ಯ. ಗ್ರಾಮೀಣ ಮಟ್ಟದಲ್ಲಿ ಅಡಗಿರುವ ಕಲೆ ಮತ್ತು ಸಂಸ್ಕೃತಿಗೆ ಸರಿಯಾದ ಮನ್ನಣೆ ಸಿಕ್ಕಾಗ, ಅದು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗುತ್ತದೆ. ಇಂತಹ ನಿರಂತರ ಪ್ರಯತ್ನಗಳಿಂದ ಮಾತ್ರ ಬಲವಾದ ಸಂಸ್ಕಾರಯುತ ಸಮಾಜ ಸುಧಾರಣೆ ಮತ್ತು ನಾಡಿನ ಸಾಂಸ್ಕೃತಿಕ ಏಳಿಗೆ ಸಾದ್ಯವಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ​ನಾಡು, ನುಡಿ ಮತ್ತು ಕಲೆಯನ್ನು ಪ್ರೀತಿಸುವ ಸಮಸ್ತ ಕಲಾಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಈ ಸಾಂಸ್ಕೃತಿಕ ಹಬ್ಬಕ್ಕೆ ಹಾರ್ದಿಕ ಆಹ್ವಾನ.

ವರದಿ : ಮಂದಾರ ರಾಜೇಶ್ ಭಟ್