ಕಾಸರಗೋಡಿನಲ್ಲಿ ‘ಮನೆ ಮನೆಗೆ ಕನ್ನಡ ಪತ್ರಿಕೆ’ ಅಭಿಯಾನ : ಆ.15ರಿಂದ ಒಂದು ವರ್ಷದ ಜನಜಾಗೃತಿ ಕಾರ್ಯಕ್ರಮ

0
13

ಕಾಸರಗೋಡು : ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಭಾಷೆ ಹಾಗೂ ಕನ್ನಡ ಪತ್ರಿಕೆಗಳ ಓದು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ‘ಮನೆ ಮನೆಗೆ ಕನ್ನಡ ಪತ್ರಿಕೆ’ ಎಂಬ ಮಹತ್ವಾಕಾಂಕ್ಷಿ ಅಭಿಯಾನಕ್ಕೆ ಕನ್ನಡಪರ ಸಂಘಟನೆಗಳು ಚಾಲನೆ ನೀಡಲು ಸಜ್ಜಾಗಿವೆ. ಆಗಸ್ಟ್‌ 15ರಿಂದ 2027ರ ಜುಲೈ 1ರವರೆಗೆ ಒಂದು ವರ್ಷದ ಅವಧಿಯಲ್ಲಿ ಈ ಅಭಿಯಾನವನ್ನು ಕೇರಳ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಕೇರಳದಲ್ಲಿ ಮಲಯಾಳಂ ಭಾಷೆಯ ಪ್ರಾಬಲ್ಯದ ನಡುವೆಯೂ ಕನ್ನಡದ ಅಸ್ತಿತ್ವಕ್ಕಾಗಿ ನಿರಂತರ ಹೋರಾಟ ನಡೆಸುತ್ತಿರುವ ಗಡಿನಾಡಿನ ಕನ್ನಡಪರ ಸಂಘಟನೆಗಳು, ಕನ್ನಡ ಪತ್ರಿಕೆಗಳ ಓದುಗರ ಸಂಖ್ಯೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಈ ವಿಶೇಷ ಅಭಿಯಾನ ರೂಪಿಸಿವೆ.

ಸರ್ಕಾರೇತರ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕಾಸರಗೋಡು ಈ ಅಭಿಯಾನದ ನೇತೃತ್ವ ವಹಿಸಿಕೊಂಡಿದ್ದು, ಪ್ರತಿಯೊಂದು ಮನೆಗೂ ಕನಿಷ್ಠ ಒಂದು ಕನ್ನಡ ಪತ್ರಿಕೆ ತಲುಪಿಸುವ ಗುರಿ ಹೊಂದಿದೆ. ಕನ್ನಡ ಪತ್ರಿಕೆ ಖರೀದಿಸಿ ಓದುವ ಅಭ್ಯಾಸವನ್ನು ಜನರಲ್ಲಿ ಮತ್ತೆ ಬೆಳೆಸುವ ಮೂಲಕ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಉಳಿವಿಗೆ ಉತ್ತೇಜನ ನೀಡುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.

ಈ ಅಭಿಯಾನದ ಭಾಗವಾಗಿ ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಮುಖ್ಯಮಂತ್ರಿಗಳನ್ನು ಶೀಘ್ರದಲ್ಲೇ ಭೇಟಿ ಮಾಡಿ, ಶಾಲೆಗಳ ತರಗತಿಗಳಲ್ಲಿಯೂ ಕನ್ನಡ ಪತ್ರಿಕೆಗಳನ್ನು ಓದುವ ಅವಕಾಶ ಕಲ್ಪಿಸುವಂತೆ ಮನವಿ ಸಲ್ಲಿಸಲಾಗುವುದು. ಅಲ್ಲದೆ, ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರವನ್ನೂ ಪಡೆಯಲು ಯೋಜಿಸಲಾಗಿದೆ.

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಮಾತನಾಡಿ, “ಕನ್ನಡ ಪತ್ರಿಕೆ ಓದುವ ಹವ್ಯಾಸವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ‘ಮನೆ ಮನೆಗೆ ಕನ್ನಡ ಪತ್ರಿಕೆ’ ಅಭಿಯಾನವನ್ನು ಆರಂಭಿಸುತ್ತಿದ್ದೇವೆ. ದೇಶದಲ್ಲೇ ಅಪರೂಪದ ಈ ಅಭಿಯಾನಕ್ಕೆ ಆ.15ರಂದು ಚಾಲನೆ ನೀಡಲಾಗುವುದು. ಕನ್ನಡಿಗರೆಲ್ಲರೂ ಇದಕ್ಕೆ ಕೈಜೋಡಿಸಬೇಕು” ಎಂದು ಮನವಿ ಮಾಡಿದ್ದಾರೆ.

ಕನ್ನಡ ಭಾಷೆ, ಸಾಹಿತ್ಯ ಹಾಗೂ ಪತ್ರಿಕಾ ಸಂಸ್ಕೃತಿಯ ಉಳಿವಿಗೆ ಈ ಅಭಿಯಾನ ಹೊಸ ಚೈತನ್ಯ ನೀಡುವ ನಿರೀಕ್ಷೆ ವ್ಯಕ್ತವಾಗಿದೆ.