ಉಡುಪಿ : ಕರಾವಳಿ ಭಾಗದಲ್ಲಿ ಮೀನುಗಾರ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ರಾಜ್ಯ ಮೀನುಗಾರರ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಸುಣಗಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಜಿಲ್ಲಾ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸುವ ಉದ್ದೇಶದಿಂದ ‘ಸಂಘಟನಾ ಸೃಜನ್ ಅಭಿಯಾನ’ ಹಮ್ಮಿಕೊಳ್ಳಲಾಗಿದೆ. ಅನೇಕ ಕಡೆಗಳಲ್ಲಿ ಜಿಲ್ಲಾ ಅಧ್ಯಕ್ಷರ ಬದಲಾವಣೆಯ ಪ್ರಕ್ರಿಯೆಯನ್ನು ನಿಯೋಜಿತ ತಂಡದ ಮೂಲಕ ಕೈಗೊಳ್ಳಲಾಗಿದೆ ಎಂದರು.
ಪಕ್ಷದ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಂಘಟನಾತ್ಮಕವಾಗಿ ದುಡಿದ ಪದಾಧಿಕಾರಿಗಳನ್ನು ಗುರುತಿಸಿ, ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸುವ ಬಗ್ಗೆ ತೀಮಾರ್ನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮೀನುಗಾರಿಕೆಯನ್ನೇ ಜೀವನೋಪಾಯವನ್ನಾಗಿಸಿಕೊಂಡಿರುವ ನೈಜ ಮೀನುಗಾರರನ್ನು ಗುರುತಿಸುವ ನಿಟ್ಟಿನಲ್ಲಿ ಗುರುತಿನ ಚೀಟಿ ವಿತರಿಸುವ ವ್ಯವಸ್ಥೆ ಈಗಾಗಲೇ ಆರಂಭಿಸಲಾಗಿದೆ. ಪ್ರಸ್ತುತ ಮೀನುಗಾರರ ಸಹಕಾರ ಸಂಘದಲ್ಲಿ ನೋಂದಣಿ ಮಾಡಿಕೊಂಡಿರುವವರನ್ನೇ ನೈಜ ಮೀನುಗಾರರು ಎಂದು ಪರಿಗಣಿಸಲಾಗುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್, ಕೆಪಿಸಿಸಿ ಜಿಲ್ಲಾ ಮೀನುಗಾರರ ಕಾಂಗ್ರೆಸ್ ಮಹಿಳಾ ವಿಭಾಗ ಅಧ್ಯಕ್ಷೆ ನಿರೀಕ್ಷಾ ಮೆಂಡನ್, ಪ್ರಮುಖರಾದ ಉಪೇಂದ್ರ ಮೆಂಡನ್, ಮಹಾಬಲ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.

