
ಕಲ್ಯಾಣ್: ತುಳುನಾಡ ತುಳುವೆರ್, ಕಲ್ಯಾಣ್ ಘಟಕದ ಮಹಿಳಾ ಸದಸ್ಯೆಯರ ವತಿಯಿಂದ ‘ಪಗೆಲ್ದ ಅಗೆಲ್’ ಕಾರ್ಯಕ್ರಮವು ಬುಧವಾರ (ಆ.5) ಕಲ್ಯಾಣ್ ಪೂರ್ವದ ಹನುಮಾನ್ ನಗರದಲ್ಲಿರುವ ನ್ಯೂ ಆಜಯ್ ಅಪಾರ್ಟ್‌ಮೆಂಟ್‌ನಲ್ಲಿ ಸಂಭ್ರಮ, ಸಾಂಸ್ಕೃತಿಕ ವೈಭವ ಹಾಗೂ ಸಾಂಪ್ರದಾಯಿಕ ಆಚರಣೆಗಳೊಂದಿಗೆ ನಡೆಯಿತು.
ಕಾರ್ಯಕ್ರಮವು ಸಂಸ್ಥೆಯ ಸಂಸ್ಥಾಪಕರಾದ ಅಶೋಕ್ ಎಲ್. ಪೂಜಾರಿ (ಉಲ್ಯಗುತ್ತು, ಪಂಜ–ಕೊಯಿಕುಡೆ) ಅವರ ಉಪಸ್ಥಿತಿಯಲ್ಲಿ ನೆರವೇರಿತು. ಆರಂಭದಲ್ಲಿ ರೇಖಾ ಶೆಟ್ಟಿ, ಸುನೀತಾ ಪೂಜಾರಿ ಹಾಗೂ ಅಂಜನಾ ಪೂಜಾರಿ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಸಂಸ್ಥಾಪಕರೊಂದಿಗೆ ಅಶೋಕ್ ಕೋಟ್ಯಾನ್, ವಿಜಯ ಕೋಟ್ಯಾನ್, ಸುಮಿತ್ರಾ ಪೂಜಾರಿ ಹಾಗೂ ದಯಾವತಿ ಸುವರ್ಣ ನಂದಾದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸುಮಿತ್ರಾ ಪೂಜಾರಿ ಅವರು ತುಳುನಾಡಿನ ಸಂಪ್ರದಾಯದಲ್ಲಿ ಮಹತ್ವ ಪಡೆದಿರುವ ಆಟಿ ಆಮಾಷೆ ಕುರಿತು ಮಾಹಿತಿ ನೀಡಿದರು. ನಂತರ ರೇಖಾ ಶೆಟ್ಟಿ ಅವರು ಆಟಿ ಕಳಂಜೆ ವೇಷದಲ್ಲಿ ಹಾಗೂ ಸುಮಿತ್ರಾ ಪೂಜಾರಿ ಅವರು ಮಾದಿರೆ ವೇಷದಲ್ಲಿ ಪಾಡ್ದನದೊಂದಿಗೆ ಸಾಂಪ್ರದಾಯಿಕ ಹೆಜ್ಜೆ ಹಾಕಿ ನೃತ್ಯ ಪ್ರದರ್ಶಿಸಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದರು. ಅವರ ಪ್ರದರ್ಶನವು ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ರೇಖಾ ಶೆಟ್ಟಿ, ಸುಮಿತ್ರಾ ಪೂಜಾರಿ, ವಿಜಯ ಕೋಟ್ಯಾನ್, ಅಂಜನಾ ಪೂಜಾರಿ, ತುಳಸಿ ಕೋಟ್ಯಾನ್, ಸುಜಾತ ಶೆಟ್ಟಿ, ಆಶಾ ಪೂಜಾರಿ, ರಾಹಿತ್ಯ ಕೋಟ್ಯಾನ್, ಅಶೋಕ್ ಕೋಟ್ಯಾನ್ ಹಾಗೂ ಅಶ್ವಿನ್ ಕೋಟ್ಯಾನ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಅಂತಿಮವಾಗಿ ಸದಸ್ಯೆಯರು ತಯಾರಿಸಿದ ವಿವಿಧ ಸಾಂಪ್ರದಾಯಿಕ ಹಾಗೂ ರುಚಿಕರ ತಿನಿಸುಗಳ ಪ್ರದರ್ಶನ ಏರ್ಪಡಿಸಿ, ಎಲ್ಲರಿಗೂ ಉಣಬಡಿಸಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ರೇಖಾ ಶೆಟ್ಟಿ ಅವರು ಧನ್ಯವಾದ ಅರ್ಪಿಸಿದರು. ತುಳುನಾಡಿನ ಸಂಸ್ಕೃತಿ, ಭಾಷೆ ಮತ್ತು ಆಚರಣೆಗಳನ್ನು ಮಹಾರಾಷ್ಟ್ರದಲ್ಲೂ ಜೀವಂತವಾಗಿಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ್ದಾಗಿವೆ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದರು.

