ತುಳು ಕೂಟ ಇಸ್ರೇಲ್‌ನಿಂದ ಚಿಕಿತ್ಸೆಗೆ ₹20 ಸಾವಿರ ನೆರವು; ಡಾ. ಪದ್ಮಪ್ರಸಾದ ಅಜಿಲ ಅವರಿಂದ ಹಸ್ತಾಂತರ

0
33

ಅಳದಂಗಡಿ: ಸಮಾಜಸೇವೆಯೇ ಧ್ಯೇಯವಾಗಿಸಿಕೊಂಡಿರುವ ತುಳು ಕೂಟ ಇಸ್ರೇಲ್ ವತಿಯಿಂದ, ತುಳು ಕೂಟ ಸಂಭ್ರಮ ಕಾರ್ಯಕ್ರಮದಲ್ಲಿ ಉಳಿಕೆಯಾದ ನಿಧಿಯನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸುವ ಸಂಕಲ್ಪದಂತೆ ಅಳದಂಗಡಿಯ ಶ್ರೀ ಸುರೇಂದ್ರ ಅವರ ಚಿಕಿತ್ಸೆಗೆ ₹20,000 ಆರ್ಥಿಕ ನೆರವು ನೀಡಲಾಯಿತು.

ನೆರವಿನ ಚೆಕ್ ಅನ್ನು ಅಳದಂಗಡಿ ಅರಮನೆಯ ಅರಸರಾದ ಡಾ. ಪದ್ಮಪ್ರಸಾದ ಅಜಿಲ ಅವರಿಂದ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಅಳದಂಗಡಿ ಶ್ರೀ ಸತ್ಯದೇವತಾ ಧೈವಸ್ಥಾನದ ಆಡಳಿತ ಮೊಕ್ತೇಸರರಾದ ಶಿವಪ್ರಸಾದ ಅಜಿಲ, ವಿತರಣಾ ಸಮಾರಂಭದ ರೂವಾರಿ ಸುಭಾಶ್ಚಂದ್ರ ರೈ ಪಡ್ಯೋಡಿಗುತ್ತು ಹಾಗೂ ಮಂಜುಶ್ರೀ ಸೀನಿಯರ್ ಚೇಂಬರ್ನ ಪ್ರಮುಖರು ಉಪಸ್ಥಿತರಿದ್ದು, ಸಮಾಜಸೇವಾ ಕಾರ್ಯವನ್ನು ಶ್ಲಾಘಿಸಿದರು.

ತುಳು ಕೂಟ ಇಸ್ರೇಲ್ ವತಿಯಿಂದ ಮಾತನಾಡಿದ ಪ್ರತಿನಿಧಿಗಳು, “ಸೇವೆಯೇ ನಮ್ಮ ಧ್ಯೇಯ, ಮಾನವೀಯತೆಯೇ ನಮ್ಮ ಹೆಮ್ಮೆ” ಎಂಬ ಧ್ಯೇಯವಾಕ್ಯದಂತೆ ಸಮಾಜದ ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ಸಂಘಟನೆಯ ಪ್ರಮುಖ ಉದ್ದೇಶವಾಗಿದೆ. ಈ ಸೇವಾ ಕಾರ್ಯಗಳಿಗೆ ಸದಸ್ಯರು ಹಾಗೂ ಹಿತೈಷಿಗಳ ಸಹಕಾರ, ಪ್ರೋತ್ಸಾಹ ಮತ್ತು ವಿಶ್ವಾಸವೇ ಪ್ರೇರಣೆಯಾಗಿದ್ದು, ಮುಂದೆಯೂ ಇಂತಹ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಶ್ರೀ ಸುರೇಂದ್ರ ಅವರು ಶೀಘ್ರವಾಗಿ ಸಂಪೂರ್ಣ ಗುಣಮುಖರಾಗಲೆಂದು ಎಲ್ಲರೂ ಹಾರೈಸಿದರು. ಕಾರ್ಯಕ್ರಮವು ಸಮಾಜಸೇವೆಯ ಮಹತ್ವವನ್ನು ಸಾರುವ ಅರ್ಥಪೂರ್ಣ ಕ್ಷಣವಾಗಿ ಗಮನ ಸೆಳೆಯಿತು.