ತುಳುವ ಮಹಾಸಭೆ ಇಂಟರ್ನ್ಯಾಷನಲ್ ಬಹರೈನ್ ಘಟಕದ ಅಧ್ಯಕ್ಷರಾಗಿ ಕಮಲಾಕ್ಷ ಅಮೀನ್ ನೇಮಕ

0
15

ಮಂಗಳೂರು: 2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆಯ ಜಾಗತಿಕ ಸಂಘಟನೆಯಾದ ತುಳುವ ಮಹಾಸಭೆ ಇಂಟರ್ನ್ಯಾಷನಲ್, ತನ್ನ ಅಂತರರಾಷ್ಟ್ರೀಯ ಸಂಘಟನಾ ವಿಸ್ತರಣೆಯ ಅಂಗವಾಗಿ ಬಹರೈನ್ ಘಟಕದ ಅಧ್ಯಕ್ಷರಾಗಿ ಕನ್ನಡ, ತುಳು ಭಾಷೆ, ಕಲೆ ಮತ್ತು ಸಂಸ್ಕೃತಿಯ ಸೇವೆಯಲ್ಲಿ ಕಳೆದ ಮೂರುವರೆ ದಶಕಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕಮಲಾಕ್ಷ ಅಮೀನ್ ಅವರನ್ನು ನೇಮಕ ಮಾಡಿದೆ.

ಮೂಲತಃ ಮಂಗಳೂರಿನವರಾದ ಕಮಲಾಕ್ಷ ಅಮೀನ್ ಅವರು ಹುಟ್ಟಿ ಬೆಳೆದದ್ದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರದಲ್ಲಿ. ಕುಂದಾಪುರದ ಸಂತ ಜೋಸೆಫ್ ಹಾಗೂ ಸಂತ ಮೇರೀಸ್ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿ, ಭಂಡಾರ್ಕಾರ್ಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಶಿಕ್ಷಣ ಪಡೆದರು. ಬಳಿಕ ಮುಂಬೈಗೆ ತೆರಳಿ ಮೂರು ವರ್ಷಗಳ ತಾಂತ್ರಿಕ ಡಿಪ್ಲೊಮಾ ಶಿಕ್ಷಣವನ್ನು ಪಡೆದರು.

1991ರಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಉದ್ದೇಶದಿಂದ ಬಹರೈನ್ ದ್ವೀಪರಾಷ್ಟ್ರವನ್ನು ಕರ್ಮಭೂಮಿಯನ್ನಾಗಿ ಮಾಡಿಕೊಂಡ ಅವರು, ಕಳೆದ ಮೂರುವರೆ ದಶಕಗಳಿಂದ ಕನ್ನಡ ಹಾಗೂ ತುಳು ಭಾಷೆ, ಕಲೆ, ಸಂಸ್ಕೃತಿ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬಹರೈನ್‌ನ ಸರ್ಕಾರಿ ನಿಯಂತ್ರಣದ ರೇಡಿಯೋ ವಾಯ್ಸ್ ಎಫ್.ಎಂ. ಬಾನುಲಿ ಕೇಂದ್ರದಲ್ಲಿ “ಕಸ್ತೂರಿ ಕನ್ನಡ” ಕಾರ್ಯಕ್ರಮದ ಪರಿಕಲ್ಪನೆ ರೂಪಿಸಿ, ಕೊಲ್ಲಿಯ ಕನ್ನಡಿಗರಿಗೆ ಕನ್ನಡದ ಕಂಪನ್ನು ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸರ್ಕಾರಿ ನಿಯಂತ್ರಣದ ಬಾನುಲಿ ಕೇಂದ್ರದಲ್ಲಿ ಕನ್ನಡ ಕಾರ್ಯಕ್ರಮವನ್ನು ನಿರ್ವಹಿಸಿ ನಿರೂಪಿಸಿದ ಪ್ರಥಮ ಕನ್ನಡಿಗ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಕಳೆದ ಎರಡು ದಶಕಗಳಿಂದ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ರೇಡಿಯೋ ನಿರೂಪಕರಾಗಿ ಕನ್ನಡ ಹಾಗೂ ತುಳುವಿನ ಧ್ವನಿಯಾಗಿ ಕೇಳುಗರನ್ನು ರಂಜಿಸುತ್ತಿದ್ದಾರೆ.

“ಕಸ್ತೂರಿ ಕನ್ನಡ” ಕಾರ್ಯಕ್ರಮದ ಮೂಲಕ ಡಾ. ಜಯಮಾಲಾ, ರಮೇಶ್ ಅರವಿಂದ್, ಗುರುಕಿರಣ್, ಕಾಸರಗೋಡು ಚಿನ್ನ, ಪ್ರೇಮ್, ರವಿಶಂಕರ್, ಅನುರಾಧಾ ಭಟ್, ಗುರುರಾಜ್ ಸೇರಿದಂತೆ ನಾಡಿನ ಹಲವು ಕಲಾವಿದರು ಹಾಗೂ ಗಣ್ಯರನ್ನು ಸಂದರ್ಶಿಸಿ, ಸಾಗರೋತ್ತರ ಪ್ರಶ್ನೋತ್ತರ ಕಾರ್ಯಕ್ರಮಗಳ ಮೂಲಕ ಕೊಲ್ಲಿಯ ಕನ್ನಡಿಗರಿಗೆ ಪರಿಚಯಿಸಿದ್ದಾರೆ. ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಬಾನುಲಿಯ ಮೂಲಕ ಜನಜಾಗೃತಿ ಮೂಡಿಸುವುದರ ಜೊತೆಗೆ ಮನರಂಜನಾ ಕಾರ್ಯಕ್ರಮಗಳನ್ನು ನೀಡಿದ ಹಿನ್ನೆಲೆಯಲ್ಲಿ ಸನ್ಮಾನಿಸಲ್ಪಟ್ಟಿದ್ದಾರೆ.

ಬಹರೈನ್‌ನಲ್ಲಿ ಕನ್ನಡ ಭಾಷೆ, ಕಲೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ತಮ್ಮ ಗೆಳೆಯರೊಂದಿಗೆ ಸೇರಿ “ನಮ್ಮ ಕನ್ನಡ ಬಹರೈನ್” ವೇದಿಕೆಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕಳೆದ ಒಂದು ದಶಕದಿಂದ ಈ ವೇದಿಕೆಯ ಮೂಲಕ ನಾಡಿನ ಸಾಧಕರು, ಚಿತ್ರರಂಗ ಹಾಗೂ ಸಂಗೀತ ಕ್ಷೇತ್ರದ ದಿಗ್ಗಜರನ್ನು ಬಹರೈನ್‌ಗೆ ಆಹ್ವಾನಿಸಿ ಅಲ್ಲಿನ ಕನ್ನಡಿಗರಿಗೆ ಉನ್ನತ ಮಟ್ಟದ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ದರ್ಶನ್, ನೆನಪಿರಲಿ ಪ್ರೇಮ್, ರವಿಶಂಕರ್, ಶ್ರೀನಾಥ್, ಸುಧಾರಾಣಿ, ಗುರುಕಿರಣ್, ಅನುರಾಧಾ ಭಟ್, ಸಿಂಚನ್ ದೀಕ್ಷಿತ್, ಸಂಗೀತ ರವೀಂದ್ರನಾಥ್, ವಿಕಾಸ್ ವಸಿಷ್ಠ, ದೀಪಕ್ ದೊಡ್ಡೇರ, ಮಿಮಿಕ್ರಿ ದಯಾನಂದ್, ಮಿಮಿಕ್ರಿ ಗೋಪಿ, ಅನುಪಮಾ ಭಟ್, ಹೇಮಂತ್, ರಮೇಶ್ಚಂದ್ರ ಹಾಗೂ ಮೂಲ್ಕಿ ಸೀಮೆಯ ಅರಸರು ಸೇರಿದಂತೆ ನಾಡಿನ ಅನೇಕ ಕಲಾವಿದರು ಮತ್ತು ಸಾಧಕರನ್ನು ಬಹರೈನ್‌ಗೆ ಕರೆತಂದು ಕನ್ನಡ ಮತ್ತು ತುಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ನಾಡಿನ ಅನೇಕ ಕಲಾವಿದರನ್ನು ದ್ವೀಪ ರಾಷ್ಟ್ರಕ್ಕೆ ಪರಿಚಯಿಸುವಲ್ಲಿ ಇವರ ಪಾತ್ರ ಮಹತ್ತರವಾಗಿದೆ.

ಹವ್ಯಾಸಿ ಪತ್ರಕರ್ತರಾಗಿಯೂ ಕಳೆದ ಮೂರು ದಶಕಗಳಿಂದ ಬಹರೈನ್‌ನ ವರದಿಗಾರರಾಗಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ. ಬಹರೈನ್‌ನಲ್ಲಿರುವ ಕನ್ನಡಿಗರ ವಿವಿಧ ಚಟುವಟಿಕೆಗಳ ಕುರಿತು ನಾಡಿನ ಜನರಿಗೆ ಸಮಗ್ರ ಮಾಹಿತಿ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಉದಯವಾಣಿ, ತರಂಗ, ರೂಪತಾರ ಸೇರಿದಂತೆ ವಿವಿಧ ಪತ್ರಿಕೆಗಳು, ದೂರದರ್ಶನ ಮಾಧ್ಯಮಗಳು ಹಾಗೂ ಅಂತರ್ಜಾಲ ತಾಣಗಳಿಗೆ ಬಹರೈನ್ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ.

ಕಳೆದ ಮೂರು ದಶಕಗಳಿಂದ ಬಹರೈನ್‌ನಲ್ಲಿ ನಡೆಯುವ ಬಹುತೇಕ ಕನ್ನಡ ಹಾಗೂ ತುಳು ಕಾರ್ಯಕ್ರಮಗಳಿಗೆ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ತಮ್ಮ ಅಪ್ಪಟ ಕನ್ನಡದ ನಿರೂಪಣೆಯ ಮೂಲಕ ಕನ್ನಡ ಭಾಷೆಗೆ ದ್ವೀಪ ರಾಷ್ಟ್ರದಲ್ಲಿ ವಿಶೇಷ ಸ್ಥಾನಮಾನ ತಂದುಕೊಟ್ಟಿದ್ದಾರೆ. ಬಹರೈನ್‌ನಲ್ಲಿ ನಡೆಯುವ ವಿವಿಧ ಕನ್ನಡ ಮತ್ತು ತುಳು ಕಾರ್ಯಕ್ರಮಗಳಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

2023ರಲ್ಲಿ ಕರ್ನಾಟಕ ಪ್ರೆಸ್ ಕೌನ್ಸಿಲ್, ಬೆಂಗಳೂರು – ಬಹರೈನ್ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅವರು, ಗಲ್ಫ್ ಕನ್ನಡಿಗರ ಒಕ್ಕೂಟದ ಬಹರೈನ್ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಬಹರೈನ್ ಕನ್ನಡ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ, ಉಪಕಾರ್ಯದರ್ಶಿ ಹಾಗೂ ಕಲಾ ವಿಭಾಗದ ಸಂಘಟಕರಾಗಿ ಹಲವು ಅವಧಿಗಳಲ್ಲಿ ಸೇವೆ ಸಲ್ಲಿಸಿರುವ ಅವರು, ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಲವು ನೂತನ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ. ಕನ್ನಡ ಸಂಘ ಆಯೋಜಿಸಿದ್ದ ಪ್ರಥಮ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆಯೂ ಇವರಿಗೆ ಸಲ್ಲುತ್ತದೆ. ಕನ್ನಡ ಸಂಘದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ದೊರಕಿಸುವಲ್ಲಿಯೂ ಮಹತ್ವದ ಪಾತ್ರ ವಹಿಸಿದ್ದಾರೆ.

ಬಹರೈನ್‌ನ ಅನಿವಾಸಿ ಬಿಲ್ಲವರ ಸಂಘಟನೆಯಾದ “ಬಹರೈನ್ ಬಿಲ್ಲವಾಸ್ನ ಪ್ರಥಮ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಅವರು, 2008ರಲ್ಲಿ ನಡೆದ “ಗಲ್ಫ್ ಬಿಲ್ಲವ ಸಮ್ಮೇಳನ”ದ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಸಾಮಾಜಿಕ ಸೇವಾ ಕ್ಷೇತ್ರದಲ್ಲಿಯೂ ಕಮಲಾಕ್ಷ ಅಮೀನ್ ಅವರ ಕೊಡುಗೆ ಗಮನಾರ್ಹವಾಗಿದೆ. ಕುಂದಾಪುರದ ಗಣೇಶ ಮಂದಿರದಿಂದ ಹಿಡಿದು ಬಡ ಅಂಗವಿಕಲ ವಿದ್ಯಾರ್ಥಿಗಳ ಶ್ರವಣ ಚಿಕಿತ್ಸೆಗೆ, ಉಡುಪಿಯ ಬಡ ವಿದ್ಯಾರ್ಥಿಯ ಹೃದಯ ಶಸ್ತ್ರಚಿಕಿತ್ಸೆಗೆ ಹಾಗೂ ಅಪಘಾತಕ್ಕೀಡಾದ ಪುತ್ತೂರಿನ ಯುವಕನ ಚಿಕಿತ್ಸೆಗೆ ಸೇರಿದಂತೆ ಹಲವು ಸಂಸ್ಥೆಗಳು ಮತ್ತು ಅಶಕ್ತರಿಗೆ ಬಹರೈನ್‌ನಿಂದ ನಿಧಿ ಸಂಗ್ರಹಿಸಿ ನೆರವು ನೀಡಿದ್ದಾರೆ.

ಬಹರೈನ್‌ನಲ್ಲಿ ಕನ್ನಡ ಭಾಷೆ, ಕಲೆ ಮತ್ತು ಸಂಸ್ಕೃತಿಗೆ ಅವರು ನೀಡಿರುವ ಕೊಡುಗೆಯನ್ನು ಗುರುತಿಸಿ 2008ರಲ್ಲಿ “ಹೃದಯವಂತರು” ಪ್ರಶಸ್ತಿ, 2014ರಲ್ಲಿ “ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ” ಹಾಗೂ 2021ರಲ್ಲಿ “ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ” ನೀಡಿ ಗೌರವಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಬಹರೈನ್‌ನ ಪ್ರಥಮ ಕನ್ನಡಿಗ ಎಂಬ ಹೆಗ್ಗಳಿಕೆ ಇವರದ್ದಾಗಿದೆ.

ಪ್ರತಿಷ್ಠಿತ ಗಂಗೂಬಾಯಿ ಹಾನಗಲ್ ಫೌಂಡೇಶನ್ ಸೇರಿದಂತೆ ನಾಡಿನ ಹಾಗೂ ಬಹರೈನ್‌ನ ಹಲವು ಸಂಘ-ಸಂಸ್ಥೆಗಳು ಹಾಗೂ ಸೌದಿ ಅರೇಬಿಯಾದ ಮಾಸ ಸಂಸ್ಥೆಯು ಕಮಲಾಕ್ಷ ಅಮೀನ್ ಅವರ ಕನ್ನಡ, ತುಳು ಕಲೆ, ಭಾಷೆ ಹಾಗೂ ಸಂಸ್ಕೃತಿಗೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಸನ್ಮಾನಿಸಿದೆ.

ಅವರ ಸಂಘಟನಾ ಸಾಮರ್ಥ್ಯ, ಸಮಾಜಸೇವೆ ಹಾಗೂ ತುಳು-ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಉಳಿವು ಹಾಗೂ ಬೆಳವಣಿಗೆಗೆ ಸಲ್ಲಿಸಿರುವ ವಿಶಿಷ್ಟ ಕೊಡುಗೆಯನ್ನು ಪರಿಗಣಿಸಿ ತುಳುವ ಮಹಾಸಭೆ ಇಂಟರ್ನ್ಯಾಷನಲ್‌ನ ಅಂತರರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ ಅವರು ಕಮಲಾಕ್ಷ ಅಮೀನ್ ಅವರನ್ನು ಬಹರೈನ್ ಘಟಕದ ಅಧ್ಯಕ್ಷರಾಗಿ ನೇಮಕಗೊಳಿಸಿದ್ದಾರೆ.

ಬಹರೈನ್‌ನಲ್ಲಿ ನೆಲೆಸಿರುವ ತುಳುವರನ್ನು ಸಂಘಟಿಸಿ, ತುಳು ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಪರಂಪರೆಯ ಸಂರಕ್ಷಣೆ ಮತ್ತು ಬೆಳವಣಿಗೆಗೆ ಶ್ರಮಿಸುವುದರ ಜೊತೆಗೆ, ಮುಂದಿನ ಪೀಳಿಗೆಗೆ ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗುವುದು.

ಈ ನೇಮಕವನ್ನು ತುಳುವರ್ಲ್ಡ್ ಫೌಂಡೇಶನ್‌ನ ಗೌರವಾಧ್ಯಕ್ಷರಾದ ಶ್ರೀ ಶ್ರೀಹರಿನಾರಾಯಣ ದಾಸ್ ಅಸ್ರಣ್ಣ ಕಟೀಲ್, ಅಧ್ಯಕ್ಷೆ ಶ್ರೀಮತಿ ಭಾನುಮತಿ ಶೆಟ್ಟಿ ಕಕ್ವಗುತ್ತು, ಕಾರ್ಯದರ್ಶಿ ಶ್ರೀ ವಸಂತ ರೈ ಕುತ್ತೇತ್ತೂರು, ನಿರ್ದೇಶಕ ಡಾ. ರಾಜೇಶ್ ಕೃಷ್ಣ ಆಳ್ವ ಹಾಗೂ ತುಳುವ ಮಹಾಸಭೆ ಇಂಟರ್ನ್ಯಾಷನಲ್‌ನ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ಶ್ರೀ ದೇವೇಂದ್ರ ಹೆಗ್ಗಡೆ ಕೊಕ್ರಾಡಿ, ಕೇಂದ್ರೀಯ ಸಮಿತಿ ಅಧ್ಯಕ್ಷ ಡಾ. ಅವಿನ್ ಬಿ. ಆರ್. ಆಳ್ವ, ಕೇಂದ್ರೀಯ ಸಮಿತಿ ಕಾರ್ಯದರ್ಶಿ ಶ್ರೀ ಅರವಿಂದ್ ಬೆಲ್ಚಾಡ ಮತ್ತು ಕೇಂದ್ರೀಯ ಸಮಿತಿ ಸಂಚಾಲಕ ಶ್ರೀ ವಿಶ್ವನಾಥ ಆಚಾರ್ಯ ಅವರು ಹರ್ಷದಿಂದ ಸ್ವಾಗತಿಸಿ, ನೂತನ ಬಹರೈನ್ ಘಟಕದ ಅಧ್ಯಕ್ಷರಾದ ಕಮಲಾಕ್ಷ ಅಮೀನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಹಾರೈಕೆಗಳನ್ನು ಸಲ್ಲಿಸಿದ್ದಾರೆ.