ಮಂಗಳೂರು : ಕರಾವಳಿಯ ನೃತ್ಯ ಕ್ಷೇತ್ರಕ್ಕೆ ಪರಂಪರೆಯ ಪಂದನಲ್ಲೂರು ಶೈಲಿಯ ಮೂಲಕ ಮಹತ್ವದ ಕೊಡುಗೆ ನೀಡಿದ ಕಲಾ ಗುರು, ಕೀರ್ತಿಶೇಷ ಕರ್ನಾಟಕ ಕಲಾಶ್ರೀ ವಿದುಷಿ ಕಮಲ ಭಟ್ ಅವರ ಸ್ಮರಣಾರ್ಥ ‘ಕಮಲಾಂಜಲಿ’ ಕಾರ್ಯಕ್ರಮವು ನಗರದ ಪುರಭವನದಲ್ಲಿ ಸಂಭ್ರಮದಿಂದ ನಡೆಯಿತು.
ನಾಟ್ಯಾಲಯ ಉರ್ವ (ರಿ.) ಸಂಸ್ಥಾಪಕಿ ಹಾಗೂ ಕಮಲ ಭಟ್ ಅವರ ಶಿಷ್ಯೆ ವಿದುಷಿ ವಿನಯ ರಾವ್ ಅವರ ಸಂಯೋಜನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುರು ಕಮಲ ಭಟ್ ಅವರಿಗೆ ಶಿಷ್ಯರು ನೃತ್ಯಾರ್ಚನೆ ಸಲ್ಲಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ಣಾಟಕ ಬ್ಯಾಂಕ್ ಮಹಾಪ್ರಬಂಧಕ ವಿನಯ್ ಪಿ.ಜೆ. ಮಾತನಾಡಿ, ಕಮಲ ಭಟ್ ಅವರು ತಮ್ಮ ಆದರ್ಶ ನಡೆ-ನುಡಿಗಳ ಮೂಲಕ ಎಲ್ಲರಿಗೂ ಮಾದರಿಯಾಗಿದ್ದರು. ಪಂದನಲ್ಲೂರು ಶೈಲಿಯ ನೃತ್ಯ ಪರಂಪರೆಯನ್ನು ಕರಾವಳಿಯಲ್ಲಿ ಬೆಳೆಸುವಲ್ಲಿ ಅವರ ಕೊಡುಗೆ ಅಪಾರ ಎಂದು ಸ್ಮರಿಸಿದರು.
ಗುರು ಉಳ್ಳಾಲ ಮೋಹನ್ ಕುಮಾರ್ ಶುಭಾಶಂಸನೆಗೈದು, ಕಮಲ ಭಟ್ ಅವರ ಶಿಷ್ಯೆ ವಿನಯ ರಾವ್ ಅವರ ಗುರುಭಕ್ತಿ ಹಾಗೂ ಗುರುಪರಂಪರೆಯ ಮೇಲಿನ ಗೌರವವನ್ನು ಶ್ಲಾಘಿಸಿದರು.
ತುಮಕೂರಿನ ಸಾಯಿ ರಾಮನ್ ನೃತ್ಯ ಕೇಂದ್ರದ ನಿರ್ದೇಶಕ ಡಾ. ಸಾಗರ್ ಟಿ.ಎಸ್. ಮಾತನಾಡಿ, ಕಮಲದ ಹೂವು ಮತ್ತೊಂದು ಕಮಲದಿಂದ ಹುಟ್ಟಿದಂತೆ, ಕಮಲ ಭಟ್ ಅವರು ಉತ್ತಮ ಶಿಷ್ಯವರ್ಗವನ್ನು ಸಮಾಜಕ್ಕೆ ಹಾಗೂ ಕಲಾ ಪ್ರಪಂಚಕ್ಕೆ ನೀಡಿದ್ದು, ಅವರ ಮೂಲಕ ಕಲೆಯ ಬೆಳವಣಿಗೆ ಮುಂದುವರಿಯುತ್ತಿದೆ ಎಂದರು.
ಭರತಾಂಜಲಿ ಸಂಸ್ಥೆಯ ನಿರ್ದೇಶಕ ಹಾಗೂ ನೃತ್ಯ ಗುರು ಶ್ರೀಧರ ಹೊಳ್ಳ ಪ್ರಾಸ್ತಾವಿಕವಾಗಿ ಮಾತನಾಡಿ, ಕಮಲ ಭಟ್ ಅವರ ಗರಡಿಯಲ್ಲಿ ಪಳಗಿದ ಒಂಬತ್ತು ಹಿರಿಯ ಶಿಷ್ಯೆಯರು ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ಭರಿಸಿ ಈ ಸುಂದರ ಕಾರ್ಯಕ್ರಮವನ್ನು ಆಯೋಜಿಸಿರುವುದು ನಿಜಾರ್ಥದಲ್ಲಿ ಗುರುಗಳಿಗೆ ಸಲ್ಲಿಸಿದ ‘ಕಮಲಾಂಜಲಿ’ ಎಂದು ಹೇಳಿದರು.
ಹಿರಿಯ ಶಿಷ್ಯೆ ಹಾಗೂ ನೃತ್ಯ ಸುಧಾ ಸಂಸ್ಥೆಯ ವಿದುಷಿ ಸೌಮ್ಯ ಸುಧೀಂದ್ರ ಕಾರ್ಯಕ್ರಮ ನಿರೂಪಿಸಿದರು. ನಾಟ್ಯಾಲಯದ ನಿರ್ದೇಶಕಿ ವಿನಯ ರಾವ್ ವಂದಿಸಿದರು. ಇದೇ ಸಂದರ್ಭದಲ್ಲಿ ಕಲಾವಿದರು ವಿನಯ ರಾವ್ ಹಾಗೂ ಕೃಷ್ಣ ರಾವ್ ದಂಪತಿಯನ್ನು ಗೌರವಿಸಿದರು.
ವಿದುಷಿಯರಾದ ದೀಪಾ ಪ್ರವೀಣ್, ಅಂಜನ ವಿಶ್ವೇಶ ಭಟ್, ಸಮೀಕ್ಷಾ ಆಚಾರ್ಯ, ದೀಕ್ಷಾ ಉಡುಪ, ಪ್ರತೀಕ್ಷಾ ರಾವ್, ಕೃಷ್ಣ ಎಂ. ನಾಯರ್, ಹರ್ಷಿತ್ ಮಲ್ಯ, ದಿವ್ಯ ತಂತ್ರಿ ಹಾಗೂ ದೀಪ್ತಿ ಎಚ್. ಅವರು ಮನೋಜ್ಞ ನೃತ್ಯ ಪ್ರದರ್ಶನ ನೀಡಿ ಕಾರ್ಯಕ್ರಮಕ್ಕೆ ಮೆರುಗು ತಂದರು.

