ಚಾಮರಾಜನಗರದಲ್ಲಿ ನಡೆದಿರುವ ಅಮಾನವೀಯ ಘಟನೆ ಅತ್ಯಂತ ಗಂಭೀರ,ತೀವ್ರ ಖಂಡನೀಯವಾಗಿದೆ. ‘ನಕಲಿ ಎನ್ಕೌಂಟರ್ ಮೂಲಕ ಕ್ರೈಸ್ತರ ಮಾರಣಹೋಮ ಮಾಡಿದ ಕಾಂಗ್ರೆಸ್ ಸರ್ಕಾರ’ ಎಂಬ ಗಂಭೀರ ಆರೋಪಗಳ ಕುರಿತು ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ತಕ್ಷಣ ಉತ್ತರಿಸಬೇಕು. ಈ ಪ್ರಕರಣವನ್ನು ಇಲಾಖೆಯ ಆಂತರಿಕ ತನಿಖೆಗೆ ಸೀಮಿತಗೊಳಿಸದೆ, ತಕ್ಷಣ ಕರ್ನಾಟಕ ಹೈಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆ ಅಥವಾ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ರುಡಾಲ್ಫ್ ಡಿಸೋಜ ರಾಜ್ಯ ಸರಕಾರವನ್ನು ಅಗ್ರಹಿಸಿದ್ದಾರೆ.
ತನಿಖೆ ಪೂರ್ಣಗೊಳ್ಳುವವರೆಗೆ ಸಂಬಂಧಪಟ್ಟ ಅರಣ್ಯ ಅಧಿಕಾರಿಗಳನ್ನು ತಕ್ಷಣ ವಜಾಗೊಳಿಸಬೇಕು. ಎನ್ಕೌಂಟರ್‌ನಲ್ಲಿ ನೇರವಾಗಿ ಭಾಗಿಯಾಗಿರುವ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು. ಅರಣ್ಯ ಸಚಿವರು ಈ ಘಟನೆಯ ನೈತಿಕ ಹೊಣೆಗಾರಿಕೆಯನ್ನು ಹೊತ್ತು ತಕ್ಷಣ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ತನಿಖೆಯ ಹೆಸರಿನಲ್ಲಿ ಕಣ್ಣೊರೆಸುವ ನಾಟಕ ಸಲ್ಲದು. ಸತ್ಯವನ್ನು ಮುಚ್ಚಿಡುವ ಪ್ರಯತ್ನ ಹಾಗೂ ತಪ್ಪಿತಸ್ಥರನ್ನು ರಕ್ಷಿಸುವ ರಾಜಕೀಯದಾಟ ಬೇಡ. ಜನರ ಜೀವದೊಂದಿಗೆ ಚೆಲ್ಲಾಟವಾಡುವ ನಿರಂಕುಶ ಆಡಳಿತವನ್ನು ಸಹಿಸಲು ಸಾಧ್ಯವಿಲ್ಲ. ಸತ್ಯ ಬೇಕು, ನ್ಯಾಯ ಬೇಕು, ಹೊಣೆಗಾರಿಕೆ ಬೇಕು ಹಾಗೂ ಅರಣ್ಯ ಸಚಿವರ ರಾಜೀನಾಮೆ ಬೇಕು ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಕ್ರೈಸ್ತ ಸಮುದಾಯದ ಮುಖಂಡರಾದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಕ್ರೈಸ್ತ ಅಭಿವೃದ್ಧಿ ನಿಗಮದ ಸದಸ್ಯ ಪ್ರಶಾಂತ್ ಜತ್ತನ್ನ ಅವರು ಕ್ರಿಶ್ಚಿಯನ್ ವ್ಯಕ್ತಿಗಳ ನರಮೇಧ ನಡೆದರೂ ಈ ಘಟನೆಯನ್ನು ಖಂಡಿಸದೆ ಮೌನ ವಹಿಸಿರುವುದು ನಾಚಿಕೆಗೇಡು. ಸರಕಾರ ತಪ್ಪಿತಸ್ಥರ ವಿರುದ್ಧ ತಕ್ಷಣ ಕೊಲೆ ಪ್ರಕರಣ ದಾಖಲಿಸಿ, ಸ್ವತಂತ್ರ ನ್ಯಾಯಾಂಗ ಅಥವಾ ಸಿಬಿಐ ತನಿಖೆ ನಡೆಸಿ ಕಾನೂನಾತ್ಮಕ ಕಠಿಣ ಶಿಕ್ಷೆ ವಿಧಿಸಬೇಕು ಎಂದು ರುಡಾಲ್ಫ್ ಡಿಸೋಜ ಪತ್ರಿಕಾ ಪ್ರಕಟಣೆಯ ಮೂಲಕ ಅಗ್ರಹಿಸಿದ್ದಾರೆ.

