ಪುತ್ತೂರು: ಅಕ್ಷಯ ಕಾಲೇಜಿನ ವಾಣಿಜ್ಯ ವಿಭಾಗದ ಇನ್ವಿಕ್ತ ಕಾಮರ್ಸ್ ಅಸೋಸಿಯೇಷನ್ ವತಿಯಿಂದ ಅಸೋಸಿಯೇಷನ್ ಉದ್ಘಾಟನಾ ಸಮಾರಂಭ ಹಾಗೂ ವೈಯಕ್ತಿಕ ಹಣಕಾಸು ಯೋಜನೆ ವಿಷಯದ ಕುರಿತು ಅತಿಥಿ ಉಪನ್ಯಾಸವನ್ನು ಆಗಸ್ಟ್ 11ರಂದು ಆಯೋಜಿಸಲಾಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಡಾ. ಪೌಲ್ ಡಿಸೋಜಾ ಅವರು ಅಸೋಸಿಯೇಷನ್ ಅನ್ನು ಉದ್ಘಾಟಿಸಿ ನಂತರ ವೈಯಕ್ತಿಕ ಹಣಕಾಸು ಯೋಜನೆಯ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಹಣವನ್ನು ಸಮರ್ಪಕವಾಗಿ ನಿರ್ವಹಿಸುವುದು, ಉಳಿತಾಯದ ಮಹತ್ವ, ಹೂಡಿಕೆ ಹಾಗೂ ಭವಿಷ್ಯದ ಆರ್ಥಿಕ ಗುರಿಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಹಣಕಾಸು ಯೋಜನೆ ರೂಪಿಸಿಕೊಳ್ಳುವ ಅಗತ್ಯವನ್ನು ಅವರು ವಿವರಿಸಿದರು.
ಅತಿಥಿ ಉಪನ್ಯಾಸದಲ್ಲಿ ವಿದ್ಯಾರ್ಥಿಗಳಿಗೆ ವೈಯಕ್ತಿಕ ಹಣಕಾಸಿನ ನಿರ್ವಹಣೆ, ಆದಾಯ ಮತ್ತು ಖರ್ಚಿನ ಸಮತೋಲನ ಉಳಿತಾಯ ಮತ್ತು ಭವಿಷ್ಯದ ಆರ್ಥಿಕ ಭದ್ರತೆಯ ಕುರಿತು ಪ್ರಾಯೋಗಿಕ ಮಾಹಿತಿಯನ್ನು ನೀಡಲಾಯಿತು. ವಿದ್ಯಾರ್ಥಿಗಳು ಉಪನ್ಯಾಸದಲ್ಲಿ ಆಸಕ್ತಿಯಿಂದ ಭಾಗವಹಿಸಿ ಹಣಕಾಸು ಯೋಜನೆಯ ಕುರಿತು ಅಗತ್ಯವಾದ ಅರಿವನ್ನು ಪಡೆದುಕೊಂಡರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಕ್ಷಣ್ ಟಿ ಆರ್ ಅವರು ವಹಿಸಿದ್ದರು. ಆಡಳಿತ ಅಧಿಕಾರಿ ಶ್ರೀಯುತ ಅರ್ಪಿತ್ ಟಿ.ಎ ಇವರು ವಿದ್ಯಾರ್ಥಿಗಳಿಗೆ ಹಣಕಾಸಿನ ಉಳಿತಾಯ ಮಾಡುವುದರ ಬಗ್ಗೆ ಹಾಗೂ ಹೂಡಿಕೆಯ ಮಹತ್ವದ ಬಗ್ಗೆ ತಿಳಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಪಾವನ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಐಕ್ಯೂ ಎಸಿ ಸಂಯೋಜಕರಾದ ಶ್ರೀಮತಿ ರಶ್ಮಿ ಕೆ ಹಾಗೂ ಇನ್ವಿಕ್ತಾ ಸಂಯೋಜಕರಾದ ಶ್ರೀಮತಿ ಯಕ್ಷಿತ ಹಾಗೂ ಅಸೋಸಿಯೇಷನ್ ವಿದ್ಯಾರ್ಥಿ ಕಾರ್ಯದರ್ಶಿ ಶ್ರೀ ಅವಿಶ್ ಶೆಟ್ಟಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಅವಿಶ್ ಶೆಟ್ಟಿ ಸ್ವಾಗತಿಸಿ, ಆಯಿಶಾತುಲ್ ವಫಾ ವಂದಿಸಿ, ಉದಿತ್ ಕಾರ್ಯಕ್ರಮ ನಿರೂಪಣೆ ಮಾಡಿದರು.

