ಕರಾವಳಿಗೆ ಹೈಕೋರ್ಟ್ ಸಂಚಾರಿ ಪೀಠಕ್ಕೆ ಆಗ್ರಹ; ಆ.22ರಂದು ಉಡುಪಿಯಲ್ಲಿ ಸಭೆ

0
5

ಉಡುಪಿ: ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಂತೆ ಕರ್ನಾಟಕ ಹೈಕೋರ್ಟ್ ಸಂಚಾರಿ ಪೀಠವನ್ನು ಮಂಜೂರು ಮಾಡಬೇಕೆಂಬ ಸುದೀರ್ಘ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಸಂಘಟಿತ ಹೋರಾಟ ನಡೆಸಲು “ಯು-ಆ್ಯಕ್ಟ್” ಮತ್ತು ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ವತಿಯಿಂದ ಆಗಸ್ಟ್ 22 ರಂದು ಎಮ್‌ಜಿ‌ಎಮ್ ಕಾಲೇಜಿನ “ರವೀಂದ್ರ ಮಂಟಪ”ದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.

ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸ್ಥಾಪಕ, ನ್ಯಾಯವಾದಿ ಪ್ರೇಮ್ ಪ್ರಸಾದ್ ಶೆಟ್ಟಿಯವರು ಮಾಹಿತಿಯನ್ನು ವಿವರಿಸಿದರು.

ಕರಾವಳಿ ಹೈಕೋರ್ಟ್ ಪೀಠ ಸ್ಥಾಪನೆಯ ಕುರಿತಾಗಿ ಅಂದು ನಡೆಯಲಿರುವ ಸಭೆಯಲ್ಲಿ ವಕೀಲರ ಸಂಘಗಳು, ಪತ್ರಕರ್ತ ಸಂಘ, ಸಾಮಾಜಿಕ ಸಂಸ್ಥೆಗಳು, ಉದ್ಯಮದಾರರ ಸಂಸ್ಥೆಗಳು, ವಿದ್ಯಾರ್ಥಿ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಮಾಜಿ ಸೈನಿಕರ ಸಂಘಗಳು, ಆಟೋ ಮತ್ತು ನೌಕರರ ಯೂನಿಯನ್‌ಗಳು ಹೀಗೆ ಎಲ್ಲಾ ವರ್ಗವನ್ನು ಪ್ರತಿನಿಧಿಸುವ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದು ಹಕ್ಕೊತ್ತಾಯ ಮಾಡಲಿದ್ದಾರೆ.

ಕರಾವಳಿ ಭಾಗದಿಂದ ಬೆಂಗಳೂರಿನ ಹೈಕೋರ್ಟ್‌ನಲ್ಲಿ ಪ್ರಕರಣಗಳನ್ನು ನಡೆಸಲು ಸಾರ್ವಜನಿಕರು ಹಲವಾರು ಬಾರಿ 900 -1000 ಕ್ಕೂ ಹೆಚ್ಚು ಕಿಲೋಮೀಟರ್ ಪ್ರಯಾಣಿಸಬೇಕಾಗಿದೆ. ಮಳೆಗಾಲದ ಸಂದರ್ಭಗಳಲ್ಲಿ ಘಾಟಿ ರಸ್ತೆಗಳ ಸಂಚಾರವೂ ಕಷ್ಟಕರವಾಗಿರುತ್ತದೆ. ಇದರಿಂದ ಸಾರ್ವಜನಿಕರು, ಕಕ್ಷಿದಾರರು ಹಾಗೂ ಮಹಿಳೆಯರು ಅಪಾರ ಸಮಯ ಮತ್ತು ಹಣವನ್ನು ವ್ಯಯಿಸಬೇಕಾಗಿದೆ.

ಈ ಭಾಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದರೆ ಶೀಘ್ರ ಮತ್ತು ಅಗ್ಗದ ವೆಚ್ಚದಲ್ಲಿ ನ್ಯಾಯ ದೊರೆಯಲು, ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಲು, ಪರಿಸರ ಸಮಸ್ಯೆಗಳು – ಭೂ ವ್ಯಾಜ್ಯಗಳು – ಸಿಆರ್‌ಝಡ್ – ಹಿರಿಯ ನಾಗರಿಕರ – ಮಹಿಳೆಯರ ಮತ್ತು ಸಾರ್ವಜನಿಕರ ಅನೇಕ ಸಮಸ್ಯೆಗಳಿಗೆ ಸ್ಥಳೀಯವಾಗಿ ಪರಿಹಾರ ದೊರಕಲು ಹಾಗೂ ಒಟ್ಟಾರೆ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಅನುಕೂಲವಾಗಲಿದೆ.

ಈ ಹೋರಾಟವು ಕೇವಲ ವಕೀಲರ ಸಮುದಾಯಕ್ಕೆ ಸೀಮಿತವಾಗಿರದೆ, ಇಡೀ ಕರಾವಳಿ ಜನತೆಯ ಧ್ವನಿಯಾಗಬೇಕಿದೆ. ಹೀಗಾಗಿ ಈ ಸಭೆಯಲ್ಲಿ ವಕೀಲರ ಸಂಘಗಳು, ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟವಾಗಿ ಕಾರ್ಯನಿರ್ವಹಿಸಲಿದೆ.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಪೌರ್ಣಾಮಿ ಪ್ರೇಮ್, ವಿಜಯ್ ಡಿಸೋಜಾ, ಮಾಧವ ಕಾಮತ್, ಸರಿತಾ, ಸುರೇಶ್ ಕಾಮತ್ ಉಪಸ್ಥಿತರಿದ್ದರು.