ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಕಾಪು ತಾಲೂಕು ಪ್ರಧಾನ ಸಂಚಾಲಕರಾಗಿ ವಿಕ್ಕಿ ಪೂಜಾರಿ ಮಡುಂಬು ನೇಮಕ

0
29

ಕಾಪು : 2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆಯ ಜಾಗತಿಕ ಸಂಘಟನೆಯಾದ ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಕಾಪು ತಾಲೂಕು ಪ್ರಧಾನ ಸಂಚಾಲಕರಾಗಿ ವಿಕ್ಕಿ ಪೂಜಾರಿ ಮಡುಂಬು ಅವರನ್ನು ನೇಮಕ ಮಾಡಲಾಗಿದೆ.

1997ರ ಫೆಬ್ರವರಿ 23ರಂದು ಇನ್ನಂಜೆ ಗ್ರಾಮದ ಮಡುಂಬುವಿನ ಕೊಲ್ಲಂಗಾಲು ಬಂಗೇರ ಕುಟುಂಬದ ಸರೋಜ ಪೂಜಾರಿ ಅವರ ಪುತ್ರರಾಗಿ ಜನಿಸಿದ ವಿಕ್ಕಿ ಪೂಜಾರಿ ಮಡುಂಬು ಅವರು ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಇನ್ನಂಜೆಯ ಎಸ್.ವಿ.ಹೆಚ್. ಸಮೂಹ ಸಂಸ್ಥೆಗಳಲ್ಲಿ ಪಡೆದಿದ್ದಾರೆ. 2014ರಿಂದ 2017ರವರೆಗೆ ಮಂಗಳೂರಿನ ಎ.ಜೆ. ಶಿಕ್ಷಣ ಸಂಸ್ಥೆಯ ಲಕ್ಷ್ಮೀ ಮೆಮೋರಿಯಲ್ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಹೋಟೆಲ್ ನಿರ್ವಹಣೆಯಲ್ಲಿ ಪದವಿ ಪಡೆದಿದ್ದಾರೆ.

ಯುವಸೇನೆ ಮಡುಂಬು ಇದರ ಸ್ಥಾಪಕ ಅಧ್ಯಕ್ಷರಾಗಿ ಎರಡು ವರ್ಷಗಳ ಕಾಲ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಅವರು, 2017ರಲ್ಲಿ ಲಕ್ಷ್ಮೀ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿ ನಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ.

ಬೆಂಗಳೂರಿನ ದಿ ಪಾರ್ಕ್ ಹೋಟೆಲ್‌ನಲ್ಲಿ ಹೋಟೆಲ್ ನಿರ್ವಹಣಾ ತರಬೇತಿ ಪಡೆದ ಬಳಿಕ ದೆಹಲಿಯ ನೋಯ್ಡಾದ ಡಿಎಲ್‌ಎಫ್ ಮಾಲ್‌ನ ಸ್ವಾಗತ್ ಬಹುಪಾಕಶಾಲಾ ಉಪಾಹಾರ ಮಂದಿರದಲ್ಲಿ ವೃತ್ತಿಜೀವನ ಆರಂಭಿಸಿದರು. ನಂತರ ಮಂಗಳೂರು, ದಾವಣಗೆರೆ, ಸುಳ್ಯ, ಪುತ್ತೂರು ಸೇರಿದಂತೆ ಮುಂಬೈ ಮಹಾನಗರಿಯ ವಿವಿಧ ಹೋಟೆಲ್‌ಗಳಲ್ಲಿ ಕಾರ್ಯನಿರ್ವಹಿಸಿ, ಕ್ಯಾಂಟೀನ್, ರೆಸ್ಟೋರೆಂಟ್, ಬಾರ್ ಹಾಗೂ ತಾರಾ ಹೋಟೆಲ್‌ಗಳ ಹೋಟೆಲ್ ಉದ್ಯಮದ ವಿವಿಧ ಆಯಾಮಗಳಲ್ಲಿ ಅನುಭವ ಪಡೆದಿದ್ದಾರೆ.

2021ರ ಮಾರ್ಚ್‌ನಿಂದ ಪ್ರಸ್ತುತ ಕಾಪು ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರದ ಮಾಧ್ಯಮ ವಿಭಾಗದಲ್ಲಿ ಪ್ರಚಾರ ಸಮಿತಿಯ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದು, ಕಾಪುವಿನ ಅಮ್ಮನ ಪ್ರತಿಷ್ಠಾ ಹಾಗೂ ಬ್ರಹ್ಮಕಲಶೋತ್ಸವದಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ.

ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಬಿರುವೆರ್ ಕಾಪು ಸೇವಾ ಸಮಿತಿ (ರಿ.) ಇದರ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಪ್ರಸ್ತುತ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯುವಸೇನೆ ಮಡುಂಬು, ಯುವವಾಹಿನಿ ಕಾಪು ಘಟಕ ಹಾಗೂ ರೋಟರಿ ಸಮುದಾಯದಳ ಇನ್ನಂಜೆ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

2018ರಲ್ಲಿ “ನಮ್ಮ ಕಾಪು” ಎಂಬ ಹೆಸರಿನಲ್ಲಿ ಆರಂಭಗೊಂಡ ಮಾಧ್ಯಮ ವೇದಿಕೆಯ ಮೂಲಕ ಪ್ರಸ್ತುತ “ನಮ್ಮ ಕಾಪು ವಾಹಿನಿ”ಯಾಗಿ ಕಾಪು ಹಾಗೂ ಸುತ್ತಮುತ್ತಲಿನ ಸುದ್ದಿಗಳನ್ನು ಜನರಿಗೆ ತಲುಪಿಸುವ ಮಾಧ್ಯಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

2025ರ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಮಾಧ್ಯಮ ಕ್ಷೇತ್ರದ ಸಾಧನೆ ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ ಬೆಂಗಳೂರಿನ ಕನ್ನಡ ಸಂಸ್ಕೃತಿ ಭವನದಲ್ಲಿ ಲಲಿತ ಕಲಾ ಅಕಾಡೆಮಿ ವತಿಯಿಂದ “ಕರುನಾಡ ರತ್ನ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪ್ರಸ್ತುತ ಜೇಸಿಐ ಭಾರತದ ವಲಯ 15ರ ಜೇಸಿಐ ಕಾಪು ಘಟಕದ 2026ನೇ ಸಾಲಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, 2026ರಲ್ಲಿ ವಲಯದ ಪ್ರತಿಷ್ಠಿತ ಮಧ್ಯಂತರ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿ ನಿರ್ವಹಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಯುವ ಸಂಘಟನೆ, ಸಾಮಾಜಿಕ ಸೇವೆ, ಮಾಧ್ಯಮ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೊಂದಿರುವ ಅನುಭವವನ್ನು ಬಳಸಿಕೊಂಡು ಕಾಪು ವಲಯದಲ್ಲಿ ತುಳುವ ಮಹಾಸಭೆಯ ಸಂಘಟನೆಯನ್ನು ಬಲಪಡಿಸುವುದು, ತುಳು ಭಾಷೆ, ಕಲೆ, ಸಂಸ್ಕೃತಿ ಹಾಗೂ ಪರಂಪರೆಯ ಸಂರಕ್ಷಣೆ ಮತ್ತು ಬೆಳವಣಿಗೆಗೆ ಶ್ರಮಿಸುವುದು ಹಾಗೂ ತುಳುವರನ್ನು ಒಗ್ಗೂಡಿಸುವ ಕಾರ್ಯಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ತುಳುವರ್ಲ್ಡ್ ಫೌಂಡೇಶನ್‌ನ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ಅವರು ವಿಕ್ಕಿ ಪೂಜಾರಿ ಮಡುಂಬು ಅವರನ್ನು ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಕಾಪು ತಾಲೂಕಿನ ಪ್ರಧಾನ ಸಂಚಾಲಕರಾಗಿ ನೇಮಕಗೊಳಿಸಿದ್ದಾರೆ.

ಈ ನೇಮಕವನ್ನು ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಅಂತರಾಷ್ಟ್ರೀಯ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ,ನಿರ್ದೆಶಕ ಡಾ.ರಾಜೇಶ್‌ ಆಳ್ವ , ಕರ್ನಾಟಕ ರಾಜ್ಯಾಧ್ಯಕ್ಷ ದೇವೇಂದ್ರ ಹೆಗ್ಗಡೆ ಕೊಕ್ರಾಡಿ ಹಾಗೂ ಜಿಲ್ಲಾ ಅಧ್ಯಕ್ಷ ಉದಯಕುಮಾರ್ ಹೆಗ್ಡೆ, ಜಿಲ್ಲಾ ಪ್ರಧಾನ ಸಂಚಾಲಕರಾದ ವಿಶ್ವನಾಥ್ ಆಚಾರ್ಯ ಪೆರ್ಡೂರು ಅವರು ಹರ್ಷದಿಂದ ಸ್ವಾಗತಿಸಿ, ನೂತನ ಕಾಪು ತಾಲೂಕು ಪ್ರಧಾನ ಸಂಚಾಲಕರಾದ ವಿಕ್ಕಿ ಪೂಜಾರಿ ಮಡುಂಬು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಹಾರೈಕೆಗಳನ್ನು ಸಲ್ಲಿಸಿದ್ದಾರೆ.