ಉಡುಪಿ : ಆಧ್ಯಾತ್ಮದ ಚಿಂತನೆ ವಿದ್ಯಾರ್ಥಿ ಜೀವನದಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಭಗವಂತನ ವಾಣಿಯಾದ ಗೀತೆಯ ಓದುವಿಕೆ ನಮ್ಮೊಳಗಿನ ಅಂತಸತ್ವವನ್ನು ಹೆಚ್ಚಿಸುತ್ತದೆ. ಪ್ರಮಾಣಿಕತೆ, ಕೃತಜ್ಞತೆ ಇತ್ಯಾದಿ ಮೌಲ್ಯಗಳಿಂದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಾಗಲು ಸಾಧ್ಯ. ಇಂಥ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಬಹು ದೊಡ್ಡದು. ಗುರುಗಳಾದ ಪೂಜ್ಯ ಶ್ರೀ ವಿಬುಧೇಶ ತೀರ್ಥ ಶ್ರೀಪಾದರು ಸ್ಥಾಪಿಸಿ, ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ನಮ್ಮ ಸಂಧ್ಯಾ ಕಾಲೇಜಿನ ಹಿರಿಮೆ ಇನ್ನಷ್ಟು ಎತ್ತರಕ್ಕೇರುವಂತಾಗಲಿ** ಎಂದು ಉಡುಪಿ ಶ್ರೀ ಅದಮಾರು ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹಾರೈಸಿದರು.
ಅವರು ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವದಿಸಿದರು..
ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ಸಂಸ್ಕೃತ ಕಾಲೇಜಿನ ಪ್ರಾಚಾರ್ಯ ಡಾ. ಅಮೃತೇಶ ಆಚಾರ್ಯ ಅವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಕಾಲೇಜಿನ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳವುದರಿಂದ ಪರಿಪೂರ್ಣತೆಯನ್ನು ಸಾಧಿಸಲು ಸಾಧ್ಯ. ನಿಮ್ಮ ಸಾಧನೆಗಳಿಂದ ಸಮಾಜದಲ್ಲಿ ಸಂಸ್ಥೆಯ ಕೀರ್ತಿ ಹೆಚ್ಚುವಂತಾಗಲಿ. ಸರಿಯಾದ ಗುರು ಮತ್ತು ಗುರಿಯ ಸ್ಪಷ್ಟತೆಯಿಂದ ಕೂಡಿದ ಸ್ವಾಭಿಮಾನದ ಬದುಕು ನಿಮ್ಮದಾಗಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಪ್ರಾಧ್ಯಾಪಕರಾದ ವಿನಾಯಕ ಪೈ ಬಿ ಅವರು ಸಿದ್ಧಪಡಿಸಿದ ವಜ್ರಮಹೋತ್ಸವದ ಲಾಂಛನವನ್ನು ಶ್ರೀಪಾದರು ಅನಾವರಣಗೊಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರಕಾಂತ ಭಟ್ ಅವರು ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಿಗೆ ಪ್ರಮಾಣವಚನವನ್ನು ಬೋಧಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಆಡಳಿತ ಮಂಡಳಿಯ ಗೌರವ ಕಾರ್ಗದರ್ಶಿಗಳಾದ ಸಿಎ. ಟಿ. ಪ್ರಶಾಂತ್ ಹೊಳ್ಳ ಶುಭ ಹಾರೈಸಿದರು. ಐಕ್ಯುಎಸಿ ಘಟಕದ ಸಂಯೋಜಕರಾದ ಡಾ.ರಾಘವೇಂದ್ರ ಎಲ್, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ವಿಶ್ವಾಸ್ ಕಾರ್ವಾಲೋ( ಅಧ್ಯಕ್ಷ), ದೇವರಾಜ ಪುತ್ರನ್(ಉಪಾಧ್ಯಕ್ಷ), ಪ್ರೀತಮ್ ಶೆಟ್ಟಿ( ಕಾರ್ಯದರ್ಶಿ), ಕು. ಮೇಘ ಪದ್ಮಶಾಲಿ ( ಉಪ ಕಾರ್ಯದರ್ಶಿ) ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಡಾ. ಪ್ರಜ್ಞಾ ಮಾರ್ಪಳ್ಳಿ ಸ್ವಾಗತಿಸಿ, ವಿನಾಯಕ ಪೈ ಬಿ ವಂದಿಸಿದರು. ಕು. ನವ್ಯಾ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರದಲ್ಲಿ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

