ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿಯ 12 ವರ್ಷದ ಸೇವಾ ಪಯಣ: “ಸ್ವಂತ ಸ್ಥಳ – ಶಾಶ್ವತ ಸೇವೆ” ಮುಂದಿನ ಗುರಿ

0
13

ಡೊಂಬಿವಲಿ : ಕಳೆದ 12 ವರ್ಷಗಳಿಂದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ, ಅಧ್ಯಕ್ಷರಾದ ಶ್ರೀ ದಿನೇಶ್ ಮೊಗವೀರ ಅವರ ನೇತೃತ್ವದಲ್ಲಿ, ಆಡಳಿತ ಸಮಿತಿ ಹಾಗೂ ಸರ್ವಸದಸ್ಯರ ಸಹಕಾರದೊಂದಿಗೆ ಹಲವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.

ಮಂಡಳಿಯ ವತಿಯಿಂದ ಪ್ರತಿವರ್ಷ ಆಯೋಜಿಸಲಾಗುವ ಅಯ್ಯಪ್ಪ ಮಹಾಪೂಜೆಯಲ್ಲಿ ಸುಮಾರು 2,000ರಿಂದ 3,000ಕ್ಕೂ ಅಧಿಕ ಅಯ್ಯಪ್ಪ ಭಕ್ತರು ಭಾಗವಹಿಸಿ ತೀರ್ಥಪ್ರಸಾದ ಹಾಗೂ ಅನ್ನಪ್ರಸಾದ ಸೇವೆಯನ್ನು ಪಡೆಯುತ್ತಾರೆ. ಭಜನೆ, ಪೂಜೆ, ಮಹಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಭಕ್ತರಲ್ಲಿ ಆಧ್ಯಾತ್ಮಿಕತೆ ಹಾಗೂ ಸಾಂಸ್ಕೃತಿಕ ಒಗ್ಗಟ್ಟನ್ನು ಬೆಳೆಸುವ ಕಾರ್ಯವನ್ನು ಮಂಡಳಿ ನಿರಂತರವಾಗಿ ಮಾಡುತ್ತಿದೆ.

ಮಂಡಳಿಯ ಎಲ್ಲಾ ಕಾರ್ಯಕ್ರಮಗಳು ಅಧ್ಯಕ್ಷರಾದ ಶ್ರೀ ದಿನೇಶ್ ಮೊಗವೀರ ಅವರ ಮಾರ್ಗದರ್ಶನದಲ್ಲಿ, ಆಡಳಿತ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ದಾನಿಗಳ ಸಹಕಾರದಿಂದ ನಡೆಯುತ್ತಿವೆ. ಮಂಡಳಿಯು 21 ಮೇ 2026ರಂದು ಅಧಿಕೃತವಾಗಿ ನೋಂದಣಿಗೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಿದೆ.

“ಬಣ್ಣಗಳಲ್ಲಿ ಬಗೆ ಬಗೆ” ಸಾಂಸ್ಕೃತಿಕ ಕಾರ್ಯಕ್ರಮ

ಮಂಡಳಿಯ ವತಿಯಿಂದ ಆಗಸ್ಟ್ 30ರಂದು ಡೊಂಬಿವಲಿ ಪಶ್ಚಿಮದ ಜನಗಣ ಮನ ಶಾಲೆಯ ವಠಾರದಲ್ಲಿ “ಬಣ್ಣಗಳಲ್ಲಿ ಬಗೆ ಬಗೆ” ಎಂಬ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಕಲಾಶಕ್ತಿ ಕಲಾತಂಡ, ಕನ್ನುಕೆರೆ–ತೆಕ್ಕಟ್ಟೆ ಇವರಿಂದ “ನಗೆ ಹಲವು ಬಗೆ” ಹಾಸ್ಯ ಕಾರ್ಯಕ್ರಮ ಪ್ರಮುಖ ಆಕರ್ಷಣೆಯಾಗಿರಲಿದೆ.

ಸ್ವಂತ ಸ್ಥಳದ ಮಹತ್ವಾಕಾಂಕ್ಷೆಯ ಗುರಿ

ಮಂಡಳಿಯ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಲು ಸ್ವಂತ ಸ್ಥಳದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಮಂಡಳಿಯು ಕಾರ್ಯಾರಂಭ ಮಾಡಿದ್ದು, ಸದಸ್ಯರು ಹಾಗೂ ದಾನಿಗಳ ಸಹಕಾರದಿಂದ ನಿಧಿಸಂಗ್ರಹಣೆಯನ್ನೂ ಆರಂಭಿಸಿದೆ.

ಸ್ವಂತ ಸ್ಥಳದ ಕನಸನ್ನು ನನಸು ಮಾಡಲು ಇನ್ನೂ ಹೆಚ್ಚಿನ ಆರ್ಥಿಕ ಸಹಕಾರದ ಅಗತ್ಯವಿದ್ದು, ಭಕ್ತರು, ಸದಸ್ಯರು ಹಾಗೂ ದಾನಿಗಳು ಕೈಜೋಡಿಸುವಂತೆ ಮಂಡಳಿ ಮನವಿ ಮಾಡಿದೆ. ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆ ಹಾಗೂ ಎಲ್ಲರ ಸಹಕಾರದಿಂದ ಈ ಮಹತ್ವದ ಗುರಿ ಸಾಕಾರಗೊಳ್ಳಲಿದೆ ಎಂಬ ವಿಶ್ವಾಸವನ್ನು ಮಂಡಳಿ ವ್ಯಕ್ತಪಡಿಸಿದೆ.

“ಸ್ವಂತ ಸ್ಥಳ – ಶಾಶ್ವತ ಸೇವೆ” ಎಂಬ ಆಶಯದೊಂದಿಗೆ ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ ತನ್ನ ಸೇವಾ ಪಯಣವನ್ನು ಇನ್ನಷ್ಟು ಬಲಪಡಿಸಿ ಮುಂದುವರಿಯುತ್ತಿದೆ.

ಸ್ವಾಗತ ಬಯಸುವವರು: ಅಧ್ಯಕ್ಷರಾದ ದಿನೇಶ್ ಮೊಗವೀರರು, ಆಡಳಿತ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಕಮಿಟಿ ಸದಸ್ಯರು ಹಾಗೂ ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿಯ ಸರ್ವಸದಸ್ಯರು.