ಮೂಡುಬಿದಿರೆ : ಪುತ್ತೂರಿನ ದರ್ಬೆಯಲ್ಲಿ ನಡೆದಿರುವ ಗಲಭೆ ಹಾಗೂ ಹಲ್ಲೆ ಪ್ರಕರಣವನ್ನು ಹಿಂದೂ ಜಾಗರಣ ವೇದಿಕೆ ಮೂಡುಬಿದಿರೆ ತಾಲೂಕು ಘಟಕ ತೀವ್ರವಾಗಿ ಖಂಡಿಸಿದೆ. ಘಟನೆಯಲ್ಲಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡಿರುವ ಹಾಗೂ ಪೊಲೀಸ್ ವಾಹನದೊಳಗೆ ನುಗ್ಗಿ ಹಲ್ಲೆ ನಡೆಸಿರುವ ಆರೋಪಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯಾವುದೇ ರೀತಿಯ ಲೋಪವಾಗಿದ್ದರೆ ಅದನ್ನೂ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆ ಒತ್ತಾಯಿಸಿದೆ.
“ಹಿಂದೂ ಸಮಾಜದ ಮೇಲೆ ಅನ್ಯಾಯವಾದಾಗ ಮೌನವಾಗಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ. ನ್ಯಾಯಕ್ಕಾಗಿ ನಡೆಯುವ ಹೋರಾಟಕ್ಕೆ ಹಿಂದೂ ಜಾಗರಣ ವೇದಿಕೆ ಸದಾ ಮುಂಚೂಣಿಯಲ್ಲಿರುತ್ತದೆ. ದರ್ಬೆ ಪ್ರಕರಣದಲ್ಲಿ ಸತ್ಯ ಹೊರಬರಬೇಕು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮವಾಗಬೇಕು ಹಾಗೂ ಸಂತ್ರಸ್ತರಿಗೆ ನ್ಯಾಯ ದೊರೆಯಬೇಕು” ಎಂದು ಹಿಂದೂ ಜಾಗರಣ ವೇದಿಕೆ ಮೂಡುಬಿದಿರೆ ತಾಲೂಕು ಸಂಯೋಜಕ ಹರಿಶ್ಚಂದ್ರ ಕೆ.ಸಿ. ತಿಳಿಸಿದ್ದಾರೆ
.
ಪುತ್ತೂರು ಘಟನೆಯನ್ನು ಖಂಡಿಸಿ ನಡೆಯಲಿರುವ ‘ಪುತ್ತೂರು ಚಲೋ’ ಕಾರ್ಯಕ್ರಮಕ್ಕೆ ಹಿಂದೂ ಜಾಗರಣ ವೇದಿಕೆ ಮೂಡುಬಿದಿರೆ ತಾಲೂಕು ಘಟಕವು ಸಂಪೂರ್ಣ ಬೆಂಬಲ ಮತ್ತು ಸಹಕಾರ ನೀಡಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ನ್ಯಾಯದ ಬೇಡಿಕೆಯನ್ನು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗಳ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಬೇಕು. ನ್ಯಾಯಕ್ಕಾಗಿ ನಡೆಯುವ ಶಾಂತಿಯುತ ಹೋರಾಟಕ್ಕೆ ಮೂಡಬಿದ್ರೆ ತಾಲೂಕಿನಿಂದಲೂ ಸಂಪೂರ್ಣ ಸಹಕಾರ ನೀಡಲಾಗುವುದು,” ಎಂದು ಹರಿಶ್ಚಂದ್ರ ಕೆ.ಸಿ. ತಿಳಿಸಿದ್ದಾರೆ.
ಕಾನೂನು ಕೈಗೆತ್ತಿಕೊಳ್ಳದೆ, ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನೊಳಗೆ ನ್ಯಾಯಕ್ಕಾಗಿ ಹೋರಾಟ ನಡೆಸುವುದು ನಮ್ಮ ನಿಲುವು. ಯಾವುದೇ ವದಂತಿಗಳಿಗೆ ಕಿವಿಗೊಡದೆ, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿಕೊಂಡು ‘ಪುತ್ತೂರು ಚಲೋ’ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅವರು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

