ಆ.30ರಂದು ಮೊಗೆದಷ್ಟೂ ಮೊಳೆಯುವ ಮೊಳಹಳ್ಳಿ’ ಕೃತಿ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮ

0
36

ಮಂಗಳೂರು: ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ (ರಿ.), ಮಂಗಳೂರು ವತಿಯಿಂದ ನಾಡಿನ ಖ್ಯಾತ ಬರಹಗಾರ ಹಾಗೂ ಶಿಕ್ಷಕ ಅರವಿಂದ ಚೊಕ್ಕಾಡಿ ಅವರು ರಚಿಸಿರುವ ಕರಾವಳಿಯ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾವ್ ಅವರ ಜೀವನಾಧಾರಿತ ‘ಮೊಗೆದಷ್ಟೂ ಮೊಳೆಯುವ ಮೊಳಹಳ್ಳಿ’ ಕೃತಿಯ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮವು ಆಗಸ್ಟ್ 30ರಂದು ಮಂಗಳೂರಿನಲ್ಲಿ ನಡೆಯಲಿದೆ.

ಆಗಸ್ಟ್ 30ರಂದು ಬೆಳಗ್ಗೆ 9.45ಕ್ಕೆ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಕೆ. ಶಿವರಾಮ ಕಾರಂತ ಸಭಾಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಲಿ., ಮಂಗಳೂರು ಅಧ್ಯಕ್ಷ ಶಶಿಕುಮಾರ್ ರೈ ಬಾಳ್ಕೊಟ್ಟು, ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು, ಉಡುಪಿ ಪ್ರಾಂಶುಪಾಲ ಡಾ. ನಿಕೇತನ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯ, ಕಲಬುರ್ಗಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರೋಹಿಣಾಕ್ಷ ಶಿರ್ಲಾಲು, ಕೃತಿಯ ಲೇಖಕ ಅರವಿಂದ ಚೊಕ್ಕಾಡಿ ಹಾಗೂ ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ (ರಿ.) ಮಂಗಳೂರು ಅಧ್ಯಕ್ಷ ಎಸ್.ಆರ್. ಹರೀಶ್ ಆಚಾರ್ಯ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟೆ, ಮಂಗಳೂರು ಪ್ರಾಂಶುಪಾಲ ಪ್ರೊ. ಜಯವಂತ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಕೃತಿ ಕುರಿತ ಸಂವಾದ ಕಾರ್ಯಕ್ರಮ ನಡೆಯಲಿದೆ.

ಲೇಖಕ ಅರವಿಂದ ಚೊಕ್ಕಾಡಿ ಅವರು ಸಂವಾದದ ಸಮನ್ವಯಕಾರರಾಗಿ ಭಾಗವಹಿಸಲಿದ್ದು, ಹಿರಿಯ ಲೆಕ್ಕಪರಿಶೋಧಕ ಸಿ.ಎ. ಚಂದ್ರಕಾಂತ ರಾವ್, ಸಹಕಾರ ಚುನಾವಣಾ ಪ್ರಾಧಿಕಾರದ ಜಂಟಿ ನಿಬಂಧಕ ಬಿ.ಕೆ. ಸಲೀಮ್, ಹಿರಿಯ ಪತ್ರಕರ್ತ ಲಕ್ಷ್ಮೀ ಮಚ್ಚಿನ, ಹಿರಿಯ ಸಹಕಾರಿ ರಾಧಾಕೃಷ್ಣ ಕೋಟೆ ಹಾಗೂ ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ (ರಿ.) ಮಂಗಳೂರು ಅಧ್ಯಕ್ಷ ಎಸ್.ಆರ್. ಹರೀಶ್ ಆಚಾರ್ಯ ಅವರು ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೊಳಹಳ್ಳಿ ಶಿವರಾವ್ ಅವರ ಜೀವನ, ಸಹಕಾರ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಹಾಗೂ ಕರಾವಳಿಯ ಸಹಕಾರ ಚಳವಳಿಯ ಬೆಳವಣಿಗೆಯನ್ನು ದಾಖಲಿಸುವ ಕೃತಿಯ ಬಿಡುಗಡೆ ಕಾರ್ಯಕ್ರಮವು ಸಾಹಿತ್ಯಾಸಕ್ತರು, ಸಹಕಾರ ಕ್ಷೇತ್ರದ ಪ್ರಮುಖರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮಹತ್ವದ ವೇದಿಕೆಯಾಗಲಿದೆ. ಕಾರ್ಯಕ್ರಮಕ್ಕೆ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ತಿಳಿಸಿದ್ದಾರೆ.