ಕಡಬ : ಖಾಸಗಿ ತರಬೇತಿ ವಿಮಾನ ಅಪಘಾತಕ್ಕೀಡಾದ ಪರಿಣಾಮ ಉಡುಪಿ ಮೂಲದ ತರಬೇತಿ ಪೈಲಟ್ವೊಬ್ಬರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಮೃತ ಯುವಕನನ್ನು 22 ವರ್ಷದ ಅಭಿಷೇಕ್ ಪೂಜಾರಿ ಎಂದು ಗುರುತಿಸಲಾಗಿದೆ. ಅವರು ಮೂಲತಃ ಉಡುಪಿ ಜಿಲ್ಲೆಯ ಕಣಜಾರು ಗ್ರಾಮದ ಕಾಡೆಬರ್ಕೆ ನಿವಾಸಿಯಾಗಿದ್ದರು ಎಂದು ತಿಳಿದುಬಂದಿದೆ.
ಮಾಹಿತಿಯ ಪ್ರಕಾರ, ಅಭಿಷೇಕ್ ಅವರು ಕಳೆದ ಸುಮಾರು ಎರಡೂವರೆ ವರ್ಷಗಳಿಂದ ಉತ್ತರ ಪ್ರದೇಶದ ಕಾನ್ಪುರದಲ್ಲಿ ಖಾಸಗಿ ತರಬೇತಿ ಪೈಲಟ್ ಆಗಿ ತರಬೇತಿ ಪಡೆಯುತ್ತಿದ್ದರು. ಪೈಲಟ್ ಆಗುವ ಕನಸು ಹೊಂದಿದ್ದ ಅವರು ತರಬೇತಿಯಲ್ಲಿದ್ದ ಸಂದರ್ಭದಲ್ಲಿ ದುರಂತ ಸಂಭವಿಸಿದೆ.
ಅಭಿಷೇಕ್ ಅವರ ತಂದೆ ಪ್ರಭಾಕರ್ ಪೂಜಾರಿ ಹಾಗೂ ತಾಯಿ ಶಶಿಕಲಾ ಪೂಜಾರಿ ಅವರು ಮಹಾರಾಷ್ಟ್ರದ ಮುಂಬೈನಲ್ಲಿ ವಾಸವಾಗಿದ್ದಾರೆ. ಅಭಿಷೇಕ್ ಅವರು ಕುಟುಂಬದೊಂದಿಗೆ ಆಗಾಗ ಕಣಜಾರು ಗ್ರಾಮದ ಕಾಡೆಬರ್ಕೆಯಲ್ಲಿರುವ ತಮ್ಮ ತಾಯಿಯ ಸಹೋದರ ಜೀವನ್ ಕುಮಾರ್ ಅವರ ಮನೆಗೆ ಭೇಟಿ ನೀಡುತ್ತಿದ್ದರು ಎಂದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ.
ತರಬೇತಿ ವಿಮಾನ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರು ಕಾನ್ಪುರಕ್ಕೆ ತೆರಳಿದ್ದಾರೆ. ಯುವಕನ ಅಕಾಲಿಕ ನಿಧನದ ಸುದ್ದಿ ತಿಳಿದು ಕಣಜಾರು ಗ್ರಾಮದ ಕಾಡೆಬರ್ಕೆ ಪರಿಸರದಲ್ಲೂ ದುಃಖದ ವಾತಾವರಣ ನಿರ್ಮಾಣವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಅಧಿಕಾರಿಗಳಿಂದ ತನಿಖೆ ಹಾಗೂ ಅಗತ್ಯ ಕಾನೂನು ಪ್ರಕ್ರಿಯೆಗಳು ಮುಂದುವರಿದಿವೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯ ಬಳಿಕ ತಿಳಿದುಬರಬೇಕಿದೆ.

