ಮಂಗಳೂರು, ಆ.31: ಪ್ರಾದೇಶಿಕ ಆರ್ಥಿಕ ಬೆಳವಣಿಗೆಗೆ ವೇಗ ನೀಡುವ ಜೊತೆಗೆ ಸ್ಥಳೀಯ ಯುವ ಪ್ರತಿಭೆಗಳಿಗೆ ಉತ್ತಮ ವೃತ್ತಿ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಬ್ಯಾಂಕ್ ಆಫ್ ಬರೋಡಾ ಕರ್ನಾಟಕದಲ್ಲಿ 418 ಲೋಕಲ್ ಬ್ಯಾಂಕ್ ಆಫೀಸರ್ (LBO) ಹುದ್ದೆಗಳ ನೇಮಕಾತಿಗೆ ಮುಂದಾಗಿದೆ.
ದೇಶದ 20 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 2,482 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡುವ ರಾಷ್ಟ್ರವ್ಯಾಪಿ ನೇಮಕಾತಿ ಅಭಿಯಾನದ ಭಾಗವಾಗಿ ಕರ್ನಾಟಕದ 418 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಈ ನೇಮಕಾತಿಯ ಪ್ರಮುಖ ವಿಶೇಷತೆಯೆಂದರೆ, ಆಯ್ಕೆಯಾಗುವ ಅಧಿಕಾರಿಗಳು ತಾವು ಅರ್ಜಿ ಸಲ್ಲಿಸಿದ ರಾಜ್ಯದಲ್ಲೇ ತಮ್ಮ ವೃತ್ತಿಜೀವನದ ಆರಂಭಿಕ 12 ವರ್ಷಗಳ ಕಾಲ ಅಥವಾ SMGS-IV ದರ್ಜೆಗೆ ಬಡ್ತಿ ಪಡೆಯುವವರೆಗೆ ಸೇವೆ ಸಲ್ಲಿಸಬೇಕು. ಈ ಎರಡರಲ್ಲಿ ಯಾವುದು ಮೊದಲು ಸಂಭವಿಸುತ್ತದೆಯೋ ಅಲ್ಲಿಯವರೆಗೆ ರಾಜ್ಯದಲ್ಲೇ ಸೇವೆ ಮುಂದುವರಿಯಲಿದೆ.
ಸ್ಥಳೀಯ ಭಾಷೆ ಹಾಗೂ ಸಂಸ್ಕೃತಿಯ ಅರಿವು ಹೊಂದಿರುವ ಅಧಿಕಾರಿಗಳನ್ನು ನೇಮಿಸಿಕೊಳ್ಳುವುದರಿಂದ ಆಯಾ ಪ್ರದೇಶಗಳ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಲು ಹಾಗೂ ಸ್ಥಳೀಯ ಜನರ ಬ್ಯಾಂಕಿಂಗ್ ಅಗತ್ಯಗಳನ್ನು ಪರಿಣಾಮಕಾರಿಯಾಗಿ ಪೂರೈಸಲು ಸಾಧ್ಯವಾಗಲಿದೆ ಎಂದು ಬ್ಯಾಂಕ್ ತಿಳಿಸಿದೆ.
ಸ್ಥಳೀಯ ಯುವಕರಿಗೆ ಉತ್ತಮ ಅವಕಾಶ
ಈ ನೇಮಕಾತಿಯ ಮೂಲಕ ಕರ್ನಾಟಕದ ಪ್ರತಿಭಾವಂತ ಯುವ ಬ್ಯಾಂಕಿಂಗ್ ವೃತ್ತಿಪರರಿಗೆ ತಮ್ಮದೇ ರಾಜ್ಯದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಅವಕಾಶ ದೊರೆಯಲಿದೆ. ಸ್ಥಳೀಯ ಮಾರುಕಟ್ಟೆ, ಭಾಷೆ ಹಾಗೂ ಗ್ರಾಹಕರ ಅಗತ್ಯತೆಗಳ ಬಗ್ಗೆ ಉತ್ತಮ ಅರಿವು ಹೊಂದಿರುವ ಅಧಿಕಾರಿಗಳ ಸೇವೆಯಿಂದ ಗ್ರಾಮೀಣ ಹಾಗೂ ಅರೆನಗರ ಪ್ರದೇಶಗಳ ಬ್ಯಾಂಕಿಂಗ್ ಜಾಲ ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಬ್ಯಾಂಕ್ ಹೊಂದಿದೆ.
ಈ ಕುರಿತು ಮಾತನಾಡಿದ ಬ್ಯಾಂಕ್ ಆಫ್ ಬರೋಡಾದ ಕಾರ್ಯನಿರ್ವಾಹಕ ನಿರ್ದೇಶಕ ಲಾಲ್ ಸಿಂಗ್, ಈ ನೇಮಕಾತಿ ಕೇವಲ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸುವ ಕ್ರಮವಲ್ಲ. ಬ್ಯಾಂಕ್ ಸೇವೆ ಸಲ್ಲಿಸುತ್ತಿರುವ ಸಮುದಾಯಗಳು ಮತ್ತು ಪ್ರಾದೇಶಿಕ ಆರ್ಥಿಕತೆಯ ಮೇಲಿನ ದೀರ್ಘಕಾಲೀನ ಹೂಡಿಕೆಯಾಗಿದೆ ಎಂದು ಹೇಳಿದರು.
ಸ್ಥಳೀಯ ಭಾಷಾ ಸಾಮರ್ಥ್ಯ ಮತ್ತು ಮಾರುಕಟ್ಟೆಯ ಆಳವಾದ ಜ್ಞಾನ ಹೊಂದಿರುವ ಯುವ ವೃತ್ತಿಪರರನ್ನು ನೇಮಿಸಿಕೊಳ್ಳುವುದರಿಂದ ವಿವಿಧ ಪ್ರದೇಶಗಳ ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳಿಗೆ ತ್ವರಿತವಾಗಿ ಸ್ಪಂದಿಸಲು ಸಾಧ್ಯವಾಗಲಿದೆ. ಇದರೊಂದಿಗೆ ಸ್ಥಳೀಯ ಪ್ರತಿಭಾವಂತರಿಗೆ ತಮ್ಮ ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತಲೇ ಉತ್ತಮ ವೃತ್ತಿಜೀವನ ರೂಪಿಸಿಕೊಳ್ಳಲು ಅವಕಾಶ ಸಿಗಲಿದೆ ಎಂದು ಅವರು ತಿಳಿಸಿದರು.
ಅರ್ಹತಾ ಮಾನದಂಡಗಳು
ಹುದ್ದೆ: ಲೋಕಲ್ ಬ್ಯಾಂಕ್ ಆಫೀಸರ್ (ಜೂನಿಯರ್ ಮ್ಯಾನೇಜ್‌ಮೆಂಟ್ ಗ್ರೇಡ್/ಸ್ಕೇಲ್-I)
ಒಟ್ಟು ಹುದ್ದೆಗಳು: ದೇಶಾದ್ಯಂತ 2,482; ಕರ್ನಾಟಕದಲ್ಲಿ 418
ವಯೋಮಿತಿ: 01.08.2026ಕ್ಕೆ ಕನಿಷ್ಠ 21 ವರ್ಷ ಹಾಗೂ ಗರಿಷ್ಠ 30 ವರ್ಷ. ಸರ್ಕಾರದ ನಿಯಮಾನುಸಾರ ಮೀಸಲಾತಿ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.
ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು.
ಅನುಭವ: RBIಯ ಎರಡನೇ ಶೆಡ್ಯೂಲ್‌ನಲ್ಲಿ ನೋಂದಾಯಿತ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿ ಕನಿಷ್ಠ ಒಂದು ವರ್ಷದ ಪದವಿಯ ನಂತರದ ಸೇವಾ ಅನುಭವ ಹೊಂದಿರಬೇಕು.
ಸ್ಥಳೀಯ ಭಾಷೆ: ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ರಾಜ್ಯದ ಸ್ಥಳೀಯ ಭಾಷೆಯನ್ನು ಓದಲು, ಬರೆಯಲು, ಮಾತನಾಡಲು ಹಾಗೂ ಅರ್ಥಮಾಡಿಕೊಳ್ಳಲು ಸಮರ್ಥರಾಗಿರಬೇಕು.
ಸೆ.7 ಅರ್ಜಿ ಸಲ್ಲಿಸಲು ಕೊನೆಯ ದಿನ
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 7, 2026ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ, ನೇಮಕಾತಿ ಪ್ರಕ್ರಿಯೆ, ಪರೀಕ್ಷೆ ಹಾಗೂ ಇತರ ವಿವರಗಳಿಗಾಗಿ ಅಭ್ಯರ್ಥಿಗಳು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್‌ನಲ್ಲಿರುವ ನೇಮಕಾತಿ ಅಧಿಸೂಚನೆಯನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ.
ಕರ್ನಾಟಕದಲ್ಲಿ 418 ಹುದ್ದೆಗಳ ನೇಮಕಾತಿಯು ರಾಜ್ಯದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶವಾಗಿದ್ದು, ಸ್ಥಳೀಯ ಪ್ರತಿಭೆಗಳನ್ನು ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಮತ್ತಷ್ಟು ಬಲವಾಗಿ ಜೋಡಿಸುವ ನಿರೀಕ್ಷೆ ಮೂಡಿಸಿದೆ.
