ಅಷ್ಟಮಿ ಭಜನೆ ವೇಳೆ ಹೃದಯಾಘಾತ : 38 ವರ್ಷದ ಶ್ರೀನಾಥ್ ಶೆಟ್ಟಿಗಾರ್ ನಿಧನ

0
68

ತೋಕೂರು : ಅಷ್ಟಮಿ ಪ್ರಯುಕ್ತ ತೋಕೂರು ಸುಬ್ರಮಣ್ಯ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿದ್ದ ಭಜನೆ ಕಾರ್ಯಕ್ರಮದ ವೇಳೆ ಮನಕಲಕುವ ಘಟನೆ ನಡೆದಿದ್ದು, ಭಜನೆ ಮಾಡುತ್ತಿದ್ದ 38 ವರ್ಷದ ಯುವಕ ಏಕಾಏಕಿ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ತೋಕೂರು ನಿವಾಸಿ ಶ್ರೀನಾಥ್ ಶೆಟ್ಟಿಗಾರ್ ಅವರು ಅಷ್ಟಮಿ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿದ್ದ ಭಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಜನೆ ಮಾಡುತ್ತಿದ್ದ ಸಂದರ್ಭದಲ್ಲೇ ಏಕಾಏಕಿ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಶ್ರೀನಾಥ್ ಅವರು ಅಷ್ಟಮಿ ಹಬ್ಬದ ಹಿನ್ನೆಲೆಯಲ್ಲಿ ಊರಿಗೆ ಆಗಮಿಸಿದ್ದರು. ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಆಸಕ್ತರಾಗಿದ್ದ ಅವರು ಸ್ಥಳೀಯ ಸಂಘಟನೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ.